ಕಾರ್ಯಕ್ರಮದ ನಂತರ ವ್ಯಕ್ತಿಯನ್ನು ಥಳಿಸಿ ಕೊಂದ ಮದುಮಗ !
ಲಕ್ನೊ, ಫೆ.8: ಮದುವೆಗೆ ಮೊದಲು ನಡೆಯಬೇಕಿರುವ ಶಾಸ್ತ್ರದ ಆಚರಣೆಯ ಸಂದರ್ಭ ತನ್ನ ಶೂಗಳನ್ನು ಕದ್ದಿದ್ದಾನೆ ಎಂಬ ಶಂಕೆಯಿಂದ ಮದುಮಗ ಹಾಗೂ ಆತನ ಸ್ನೇಹಿತರು ಸೇರಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಘಟನೆ ಉತ್ತರಪ್ರದೇಶದ ಸೂರಜ್‌ಪುರ ಗ್ರಾಮದಲ್ಲಿ ನಡೆದಿದೆ.
ಸುರೇಂದ್ರ ಎಂಬಾತನ ಮದುವೆ ನಿಗದಿಯಾಗಿದ್ದು ಮದುವೆಗೂ ಮೊದಲು ನಡೆಯಬೇಕಿರುವ ಕೆಲವು ಸಂಪ್ರದಾಯಗಳ ಆಚರಣೆ ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಮದುಮಗ ಸುರೇಂದ್ರನ ಶೂಗಳು ನಾಪತ್ತೆಯಾಗಿವೆ. ಆಗ ಅಲ್ಲಿದ್ದ ರಾಮಶರಣ್(42 ವರ್ಷ) ಎಂಬಾತನ ಮೇಲೆ ಅನುಮಾನ ಬಂದಿದ್ದು ಮದುಮಗ ಹಾಗೂ ಆತನ ನಾಲ್ವರು ಸ್ನೇಹಿತರು ರಾಮ್‌ಶರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ರಾಮ್‌ಶರಣ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ . ಮೃತನ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.