ಮಕ್ಕಳನ್ನು ಭಿಕ್ಷೆ ಬೇಡಿಸುವುದನ್ನು ನಿಲ್ಲಿಸಿ ಸರಕಾರದ ಬಿಸಿಯೂಟ ಪಡೆಯಿರಿ

Update: 2018-02-09 09:39 GMT

ಮಂಗಳೂರು, ಫೆ.9: ಕಲ್ಲಡ್ಕದ ಶ್ರೀರಾಮ ಹಾಗೂ ಪುಣಚದ ಶ್ರೀ ದೇವಿ ಪ್ರೌಢಶಾಲೆಗಳಿಗೆ ಅಕ್ಷರ ದಾಸೋಹದಡಿ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ಅಧಿಕಾರಿಗಳಿಂದ ಸಾಕಷ್ಟು ಪತ್ರ ವ್ಯವಹಾರಗಳು ನಡೆದಿದ್ದರೂ ಶಾಲೆಗಳ ಆಡಳಿತ ಮಂಡಳಿ ಸ್ಪಂದಿಸದೆ ಮಕ್ಕಳನ್ನು ಹಕ್ಕುಗಳಿಂದ ವಂಚಿಸಲಾಗಿದೆ. ಬಿಸಿಯೂಟಕ್ಕಾಗಿ ಮಕ್ಕಳನ್ನು ಭಿಕ್ಷೆ ಬೇಡಿಸುವುದನ್ನು ನಿಲ್ಲಿಸಿ ಸರಕಾರದಿಂದ ಸಿಗುವ ಸೌಲಭ್ಯವನ್ನು ಈ ಶಾಲೆಗಳು ಪಡೆಯಬೇಕು ಎಂದು ಜಿಪಂ ವಿಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿ.ಪಂ. ವಿಪಕ್ಷ ನಾಯಕ ಎಂ.ಎಸ್.ಮುಹಮ್ಮದ್, ರಾಜ್ಯದ ಎಲ್ಲಾ ಅನುದಾನಿತ ಶಾಲೆಗಳಿಗೂ ರಾಜ್ಯ ಸರಕಾರದ ಬಿಸಿಯೂಟ ಲಭ್ಯವಿವೆ. ಈ ಎರಡು ಶಾಲೆಗಳು ಸರಕಾರದಿಂದ ದೊರೆಯುವ ಅಧ್ಯಾಪಕರ ವೇತನ, ಹಾಲು, ಪುಸ್ತಕ, ಸೈಕಲ್, ಶೂ ಮೊದಲಾದ ಸೌಲಭ್ಯಗಳನ್ನು ಪಡೆಯುತ್ತಿವೆ. ಆದರೆ ಬಿಸಿಯೂಟಕ್ಕಾಗಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಯಾದಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಬೇಡಿಕೆ ಸಲ್ಲಿಸುವಂತೆ ಹಲವಾರು ಬಾರಿ ಸೂಚಿಸಿದ್ದರೂ ಸ್ಪಂದನೆ ದೊರಕಿಲ್ಲ ಎಂದು ದೂರಿದರು.

ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ವಿಪಕ್ಷವಾದ ಕಾಂಗ್ರೆಸ್‌ನ 15 ಸದಸ್ಯರು ಕೂಡಾ ಈ ಎರಡೂ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ತಕ್ಷಣದಿಂದ ಜಾರಿಗೊಳಿಸುವಂತೆ ಆಗ್ರಹಿಸಿ ಅಭಿಪ್ರಾಯ ದಾಖಲಿಸಿದ್ದಾರೆ. ಹಾಗಿದ್ದರೂ ಆಡಳಿತ ಪಕ್ಷ ತನ್ನ ಜವಾಬ್ಧಾರಿಯನ್ನು ನಿರ್ವಹಿಸಿಲ್ಲ. ಈ ಎರಡೂ ಶಾಲೆಗಳ ಮಕ್ಕಳಿಗೂ ಇತರ ಎಲ್ಲಾ ಶಾಲೆಗಳಂತೆಯೇ ಮಧ್ಯಾಹ್ನದ ಬಿಸಿಯೂಟ ಪಡೆಯುವ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟಕ್ಕೆ ಜಿ.ಪಂ.ನ ಸದಸ್ಯರು ಸಿದ್ಧ ಎಂದು ಎಂ.ಎಸ್. ಮುಹಮ್ಮದ್ ನುಡಿದರು.

ಭಿಕ್ಷಾಟನೆಯನ್ನು ನಿಷೇಧಿಸಲಾಗಿದ್ದರೂ ಮಕ್ಕಳನ್ನು ಭಿಕ್ಷಾಟನೆ ಮಾಡಿಸಿರುವುದು ಅಪರಾಧ. ಮಾತ್ರವಲ್ಲದೆ, ಶಾಲೆಯ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಅಣಕಿಸಿರುವುದನ್ನೂ ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು. ಸದ್ಯ ರಾಜ್ಯ ಸರಕಾರದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರವೇ ಮಧ್ಯಾಹ್ನದ ಬಿಸಿಯೂಟ ಸೌಲಭ್ಯವಿವೆ. ಅದನ್ನು ಈ ಶಾಲೆಗಳೂ ಪಡೆಯಬೇಕೆಂಬುದು ನಮ್ಮ ಆಗ್ರಹ. ಸರಕಾರದ ಹಣ ಬೇಕು, ಅನ್ನ ಬೇಡ ಎಂಬ ಧೋರಣೆ ಸರಿಯಲ್ಲ. ಈ ರೀತಿ ಮಕ್ಕಳ ಹಕ್ಕಾದ ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು.

ಈ ಎರಡೂ ಶಾಲೆಗಳಿಗೆ ದ.ಕ. ಜಿಲ್ಲಾ ಪಂಚಾಯತ್‌ನ ಅಕ್ಷರ ದಾಸೋಹ ಯೋಜನೆಯಡಿ ಊಟದ ಸೌಲಭ್ಯ ಪಡೆಯಲು ಆಗ್ರಹಿಸಲಾಗಿದ್ದರೂ ಶಾಲಾ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಆಸಕ್ತಿ ವಹಿಸಿಲ್ಲ ಎಂಬುದಾಗಿ ಅಕ್ಷರ ದಾಸೋಹ ಕಚೇರಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರವನ್ನೂ ಬರೆಯಲಾಗಿದೆ ಎಂದು ಜಿ.ಪಂ. ಸದಸ್ಯೆ ಮಮತಾ ಗಟ್ಟಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಗೌಡ, ಸದಸ್ಯರಾದ ಧರಣೇಂದ್ರ ಕುಮಾರ್, ಚಂದ್ರಪ್ರಕಾಶ್ ತುಂಬೆ, ಮಂಜುಳಾ ಮಾವೆ, ಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News