ಮಂಗಳೂರು: 'ಕರ್ನಾಟಕ ಹಕ್ಕಿ ಹಬ್ಬ'ಕ್ಕೆ ಚಾಲನೆ

Update: 2018-02-09 15:01 GMT

ಮಂಗಳೂರು, ಫೆ.9: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ 3 ದಿನಗಳ 4ನೇ ಕರ್ನಾಟಕ ಹಕ್ಕಿ ಹಬ್ಬಕ್ಕೆ ಇಂದು ನಗರದ ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ರಂಗನತಿಟ್ಟಿನಲ್ಲಿ ಹಕ್ಕಿ ಹಬ್ಬ ಮಾಡಲಾಗಿತ್ತು. ಇದು ಪಕ್ಷಿ ವೀಕ್ಷಕರಿಗೆ ಅನುಕೂಲವಾಗಿದ್ದು, ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಹವ್ಯಾಸಿಗಳಿಗೆ ಅನುಕೂಲವಾಗಿದೆ. ಹಕ್ಕಿಗಳಿಗಾಗಿ ಮೀಸಲು ಅರಣ್ಯಗಳು ನಮ್ಮಲ್ಲಿ ಸಾಕಷ್ಟಿವೆ. ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆನೆ, ಹುಲಿ, ಸಿಂಗಳೀಕ, ಚಿರತೆಯಲ್ಲಿ ರಾಜ್ಯ ದೇಶಕ್ಕೇ ನಂಬರ್ ಒನ್ ಸ್ಥಾನದಲ್ಲಿ ದೆ ಎಂದು ಅವರು ಹೇಳಿದರು. ಹಿಂದೆ ಪ್ರಾಣಿಗಳಿಂದ ರಕ್ಷಿಸಲು ಮನುಷ್ಯರು ಗುಹೆಗಳಲ್ಲಿ ವಾಸವಾಗಿರುತ್ತಿದ್ದರು. ಆದರೆ ಇಂದು ಮನುಷ್ಯರಿಂದ ರಕ್ಷಿಸಿಕೊಳ್ಳಲು ಪ್ರಾಣಿಗಳು ಗುಹೆಯ ಮೊರೆ ಹೋಗುವಂತಾಗಿದೆ. ವನ್ಯಜೀವಿ ಕಾಯಿದೆಯ ಬಳಿಕ ಈಗ ಪ್ರಾಣಿ, ಪಕ್ಷಿಗಳನ್ನು ಕೊಲ್ಲಬಾರದು ಎಂಬ ಮನವರಿಕೆ ಜನಸಾಮಾನ್ಯರಿಗಾಗಿದೆ. ಕೃಷಿ ನಾಶವಾಗುವ ಕಾರಣಕ್ಕೆ ಪ್ರಾಣಿಗಳನ್ನು ಸಾಯಿಸುವ ಕೆಲಸವಾಗುತ್ತದೆ. ಆದರೆ ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನು ಕೊಲ್ಲುವುದು ಬಹಳಷ್ಟು ಕಡಿಮೆಯಾಗಿದೆ ಎಂದರು.

11ರಂದು ಪಕ್ಷಿ ದ್ವೀಪ ವೀಕ್ಷಣೆ
ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ ಬಿಜೂರ್ ಮಾತನಾಡಿ, ಈ ಹಕ್ಕಿ ಹಬ್ಬ 3 ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದೆ. ಇದರ ಅಂಗವಾಗಿ ಪಿಲಿಕುಳದಲ್ಲಿ ಪಕ್ಷಿ ತಜ್ಞರಿಂದ ಉಪನ್ಯಾಸ, ವ್ಯಂಗ್ಯಚಿತ್ರ ಕಾರ್ಯಾಗಾರ, ರಸಪ್ರಶ್ನೆ ನಡೆಯಲಿದೆ. ಅಲ್ಲದೆ ಸಸಿಹಿತ್ಲು, ಮಂಗಳೂರು ಜೌಗು ಪ್ರದೇಶ ಹಾಗೂ ಮಂಗಳೂರು ವಿವಿಗಳಲ್ಲಿ ಪಕ್ಷಿ ಪ್ರವಾಸೋದ್ಯಮ ಏರ್ಪಡಿಸಲಾಗಿದೆ. ಫೆ.11ರಂದು ಬೋಟಿನಲ್ಲಿ ದ್ವೀಪಕ್ಕೆ ತೆರಳಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷಿ ಸಂರಕ್ಷಣೆ ಕುರಿತ ಸ್ಟಿಕ್ಕರ್, ಕರಪತ್ರ, ಪ್ರವಾಸೋದ್ಯಮ ಮ್ಯಾಪ್‌ನ್ನು ಸಚಿವರು ಬಿಡುಗಡೆಗೊಳಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಚಿಕ್ಕಮಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್ ರಾಜ್, ಮಾಜಿ ಅರಣ್ಯಪಡೆ ಮುಖ್ಯಸ್ಥ ವಿನಯ್ ಲೂಥ್ರಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಲನ್ ಉಪಸ್ಥಿತರಿದ್ದರು. ಸಮಾರಂಭಕ್ಕೆ ಮುನ್ನ ಪಕ್ಷಿ ಜಾಗೃತಿ ಜಾಥಾ ಹಾಗೂ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ನುಡಿದಂತೆ ನಡೆ ಎಂಬ ಪರಿಸರ ನೃತ್ಯ ನಡೆಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News