ಮಾಲ್ದೀವ್ಸ್ ಬಿಕ್ಕಟ್ಟು: ಫೋನ್‌ನಲ್ಲಿ ಮೋದಿ, ಟ್ರಂಪ್ ಮಾತುಕತೆ

Update: 2018-02-09 16:30 GMT

ವಾಶಿಂಗ್ಟನ್, ಫೆ. 9: ಮಾಲ್ದೀವ್ಸ್ ಬಿಕ್ಕಟ್ಟಿನ ವಿಷಯದಲ್ಲಿ ಗುರುವಾರ ಫೋನ್‌ನಲ್ಲಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಿಕ್ಕಟ್ಟು ಮುಂದುವರಿದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಅಪಾಯಕ್ಕೊಳಗಾಗಿರುವ ತನ್ನ ಸರಕಾರವನ್ನು ಉಳಿಸುವುದಕ್ಕಾಗಿ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್, ಚೀನಾ, ಪಾಕಿಸ್ತಾನ ಮತ್ತು ಸೌದಿ ಅರೇಬಿಯ ದೇಶಗಳಿಗೆ ವಿಶೇಷ ರಾಯಭಾರಿಗಳನ್ನು ಕಳುಹಿಸಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಮಾತುಕತೆ ಮಹತ್ವ ಪಡೆದುಕೊಂಡಿದೆ.

ಮಾಲ್ದೀವ್ಸ್‌ನ ರಾಯಭಾರಿಗಳು ಭಾರತಕ್ಕೆ ಬಂದಿಲ್ಲ.

ಆದಾಗ್ಯೂ, ತನ್ನ ವ್ಯಾಪ್ತಿಯಿಂದ ಭಾರತವನ್ನು ಹೊರಗಿಡುವ ಉದ್ದೇಶವಿರಲಿಲ್ಲ, ಆದರೆ ಅದಕ್ಕೆ ಮನವರಿಕೆ ಮಾಡಿಕೊಡುವಲ್ಲಿ ತಾನು ವಿಫಲನಾದೆ ಎಂದು ಮಾಲ್ದೀವ್ಸ್ ಹೇಳಿದೆ.

ಜೈಲಿನಲ್ಲಿರುವ ಪ್ರತಿಪಕ್ಷಗಳ 9 ನಾಯಕರನ್ನು ಬಿಡುಗಡೆ ಮಾಡಬೇಕು ಹಾಗೂ ಪಕ್ಷಾಂತರ ಮಾಡಿದ ಆಡಳಿತಾರೂಢ ಪಕ್ಷದ ಸಂಸದರ ಸದಸ್ಯತ್ವವನ್ನು ಮರಳಿಸಬೇಕು ಎಂಬುದಾಗಿ ಕಳೆದ ವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಹಿಂದೂ ಮಹಾ ಸಾಗರ ದ್ವೀಪ ರಾಷ್ಟ್ರದಲ್ಲಿ ಬಿಕ್ಕಟ್ಟು ನೆಲೆಸಿದೆ.

ಆದೇಶವನ್ನು ಪಾಲಿಸಲು ನಿರಾಕರಿಸಿರುವ ಯಮೀನ್ ಸರಕಾರ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದೆ ಹಾಗೂ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನು ಬಂಧಿಸಿದೆ.

ಅದೇ ವೇಳೆ, ಭಾರತ-ಪೆಸಿಫಿಕ್ ವಲಯದ ಭದ್ರತೆ ಮತ್ತು ಸಮೃದ್ಧತೆಯನ್ನು ಹೆಚ್ಚಿಸುವುದಕ್ಕಾಗಿ ಜೊತೆಯಾಗಿ ಕೆಲಸ ಮಾಡುವ ಬದ್ಧತೆಯನ್ನೂ ಉಭಯ ನಾಯಕರು ಮಾತುಕತೆಯ ವೇಳೆ ವ್ಯಕ್ತಪಡಿಸಿದರು ಎಂದು ಫೋನ್ ಮಾತುಕತೆಯ ವಿವರಗಳನ್ನು ಒಳಗೊಂಡ ಹೇಳಿಕೆಯೊಂದರಲ್ಲಿ ಶ್ವೇತಭವನ ತಿಳಿಸಿದೆ.

ಅಫ್ಘಾನಿಸ್ತಾನ, ಮ್ಯಾನ್ಮಾರ್ ಮತ್ತು ರೊಹಿಂಗ್ಯಾ ಬಿಕ್ಕಟ್ಟಿನ ಬಗ್ಗೆಯೂ ಮೋದಿ ಮತ್ತು ಟ್ರಂಪ್ ಚರ್ಚಿಸಿದರು. ಉತ್ತರ ಕೊರಿಯದ ಪರಮಾಣು ಬೆದರಿಕೆಯೂ ಅವರ ಮಾತುಕತೆಯಲ್ಲಿ ಪ್ರಸ್ತಾಪವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News