×
Ad

ಭಾರತಕ್ಕೆ ಮತ್ತೊಂದು ಸೋಲು: ಸಿಂಧುಗೆ ಜಯ

Update: 2018-02-09 23:55 IST

ಮಲೇಷ್ಯಾ,ಫೆ.9: ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಂಡ ಇಂಡೋನೇಷ್ಯಾ ವಿರುದ್ಧ ಸೋಲುಂಡಿದೆ. ಈ ಮೂಲಕ ಸತತ ಎರಡನೇ ಸೋಲು ಕಂಡಿದೆ.

ಗುರುವಾರ ನಡೆದ ಜಪಾನ್ ವಿರುದ್ಧದ ಪಂದ್ಯವನ್ನು ಸೋತಿರುವ ಭಾರತ ಶುಕ್ರವಾರ ಇಂಡೋನೇಷ್ಯಾ ವಿರುದ್ಧದ ಪಂದ್ಯವನ್ನು 1-3 ಅಂತರದಿಂದ ಸೋತಿದೆ. ಭಾರತದ ಪರ ಪಿ.ವಿ. ಸಿಂಧು ಮಾತ್ರ ಗೆಲುವು ಸಾಧಿಸಿದ್ದಾರೆ. ಉಳಿದವರು ಸೋಲಿನ ಕಹಿ ಉಂಡರು.

ಮೊದಲ ಸಿಂಗಲ್ಸ್‌ನಲ್ಲಿ ಸಿಂಧು ಇಂಡೋನೇಷ್ಯಾದ ಫಿಟ್ರಿಯಾನಿ ಫಿಟ್ರಿಯಾನಿ ಅವರನ್ನು 21-13, 24-22 ಗೇಮ್‌ಗಳಿಂದ ಮಣಿಸಿ ಭಾರತಕ್ಕೆ ಶುಭಾರಂಭ ನೀಡಿದರು.

ಆದರೆ, ಆ ಬಳಿಕ ನಡೆದ ಮೂರೂ ಪಂದ್ಯಗಳಲ್ಲಿ ಭಾರತ ಸೋಲುಂಡಿತು.

ಮೊದಲ ಮಹಿಳಾ ಡಬಲ್ಸ್ ಹಣಾಹಣಿಯಲ್ಲಿ ಗ್ರೆಸಿಯಾ ಪೊಲ್ಲಿ ಹಾಗೂ ಅಪ್ರಿಯಾನಿ ರಹಾಯು ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಅವರನ್ನು 21-5, 21-16 ಗೇಮ್‌ಗಳಿಂದ ಸೋಲಿಸಿದ್ದಾರೆ.

ಎರಡನೇ ಸಿಂಗಲ್ಸ್‌ನಲ್ಲಿ ಹನ್ನಾ ರಮಾದಿನಿ ಭಾರತದ ಪ್ರಿಯಾ ಕುದ್ರವಲ್ಲಿ ಅವರನ್ನು 21-8, 21-15 ರಿಂದ ಸೋಲಿಸಿದ್ದಾರೆ. ಎರಡನೇ ಡಬಲ್ಸ್‌ನಲ್ಲಿ ಇಂಡೋನೇಷ್ಯಾದ ಜೋಡಿ ಅಂಗಿಯಾ ಶಿಟ್ಟಾ ಅವಾಂಡ ಹಾಗೂ ಮಹಾದೇವಿ ಇಸ್ಟಾರಾಣಿ ಅವರು ಸಿಂಧು ಹಾಗೂ ಸನ್ಯೋಗಿತಾ ಘೋರ್ಪಡೆ ಅವರನ್ನು 21-9, 21-18 ಗೇಮ್‌ಗಳಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News