ಮೊಬೈಲ್ ಬಳಸುತ್ತಾ ಟಾಯ್ಲೆಟ್ ನಲ್ಲಿ ಕೂತರೆ ಇದೆ ಈ ಅಪಾಯ !

Update: 2018-02-10 15:01 GMT

ಚೀನಾ, ಫೆ.10: ಕೆಲವರಿಗೆ ಶೌಚಾಲಯದಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವ ಅಭ್ಯಾಸವಿರುತ್ತದೆ. ಮೊಬೈಲ್ ಬಂದ ಮೇಲಂತೂ ಇಂತಹ ಅಭ್ಯಾಸಗಳು ಹೆಚ್ಚಾಗಿದೆ ಎನ್ನುವುದು ಸುಳ್ಳಲ್ಲ. ಸುಮಾರು 30 ನಿಮಿಷಗಳ ಕಾಲ ಶೌಚಾಲಯದಲ್ಲಿ ಮೊಬೈಲ್ ಬಳಸಿದ ಚೀನಾದ ವ್ಯಕ್ತಿಯೊಬ್ಬನಿಗೆ ಎದುರಾದ ಅಪಾಯವೊಂದು ಈ ಅಭ್ಯಾಸವಿರುವವರಲ್ಲಿ ಸಣ್ಣಗೆ ನಡುಕ ಹುಟ್ಟಿಸಬಹುದು.

ಗುವಾಂಡೋಂಗ್ ಪ್ರಾಂತ್ಯದ ಝೋಂಗ್ ಶಾನ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬ 30 ನಿಮಿಷಗಳ ಕಾಲ ಶೌಚಾಲಯದಲ್ಲಿ ಮೊಬೈಲ್ ಗೇಮ್ ಆಡುತ್ತಾ ಕುಳಿತಿದ್ದ. ದೀರ್ಘಕಾಲದವರೆಗೆ ಹೀಗೆ ಕೂತ ಪರಿಣಾಮ ಆತನ ಗುದದ್ವಾರದಿಂದ ಗುದನಾಳದ ಭಾಗವೇ ಹೊರ ಬಂದು ಬಿಟ್ಟಿದೆ.

ದೇಹದೊಂದಿಗೆ ಜೋಡಣೆಯಲ್ಲಿರುವ ಗುದನಾಳ ಈ ರೀತಿ ಹೊರಬಂದದ್ದರಿಂದ ತಕ್ಷಣವೇ ಆತನನ್ನು ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ತಪಾಸಣೆ ನಡೆಸಿರುವ ವೈದ್ಯರು ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ರೆಕ್ಟಲ್ ಪ್ರೊಲ್ಯಾಪ್ಸ್’ ( ದೊಡ್ಡ ಕರುಳಿನ ಕೊನೆಯ ಭಾಗ ದೇಹದೊಳಗೆ ತನ್ನ ಸಹಜ ಸ್ಥಾನದಿಂದ ಪಲ್ಲಟಗೊಂಡು ಗುದದ್ವಾರದ ಮೂಲಕ ಹೊರಗೆ ಬಂದು ನೇತಾಡುವುದು) ಎನ್ನುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಶೌಚಾಲಯದಲ್ಲಿ ಕೂತಿದ್ದ ತಾನು ಮೊಬೈಲ್ ಗೇಮ್ ಆಡುತ್ತಿದ್ದೆ ಎಂದು ಈ ವ್ಯಕ್ತಿ ಹೇಳಿದ್ದಾನೆ.

4 ವರ್ಷವಿದ್ದಾಗಲೇ ಈ ವ್ಯಕ್ತಿಗೆ ರೆಕ್ಟಲ್ ಪ್ರೊಲ್ಯಾಪ್ಸ್ ಸಮಸ್ಯೆಯಿತ್ತು. ಆದರೆ ಈ ಬಾರಿ ದೀರ್ಘ ಕಾಲ ಕುಳಿತಿದ್ದರ ಪರಿಣಾಮ ಈ ಸಮಸ್ಯೆ ಕಾಣಿಸಿಕೊಂಡಿದೆ. ಶಸ್ತ್ರಚಿಕಿತ್ಸೆಯ ಮೂಲಕ ಗುದನಾಳವನ್ನು ತೆಗೆಯಲಾಗಿದ್ದು. ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News