ಜಾನಪದದಲ್ಲಿ ಮಾನವಿಕ ದೃಷ್ಠಿಕೋನ ಅಡಗಿದೆ: ಪ್ರೊ.ವಿವೇಕ ರೈ

Update: 2018-02-10 15:19 GMT

ಉಡುಪಿ, ಫೆ.10: ಜಾನಪದದಲ್ಲಿ ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಮಾನವ ವಿಜ್ಞಾನ, ಸಸ್ಯ ಮತ್ತು ಪ್ರಾಣಿ ವಿಜ್ಞಾನ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಮಾನವಿಕವಾದ ದೃಷ್ಠಿಕೋನ ಇದೆ ಎಂದು ಹಿರಿಯ ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ದಕ್ಷಿಣ ಭಾರತೀಯ ಜಾನಪದ ಅಧ್ಯಯನ ಸಂಸ್ಥೆ(ಫಾಸಿಲ್ಸ್) ತಿರುವನಂತ ಪುರ, ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಸಂಯುಕ್ತ ಆಶ್ರಯ ದಲ್ಲಿ ಉಡುಪಿ ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಜಾನಪದ ಬಹುಮುಖಿ ಆಯಾಮಗಳು ಹಾಗೂ ಜಾನಪದ ಅಧ್ಯಯನ ಇತ್ತೀಚೆಗಿನ ಬೆಳವಣಿಗೆಗಳು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಾವು ಜಾನಪದವನ್ನು ಓದಿಕೊಳ್ಳುವುದರ ಜೊತೆಗೆ ಕೊಡವ, ಕನ್ನಡ ಹಾಗೂ ತುಳು ಸಾಮಗ್ರಿ ಹಾಗೂ ಸಂಸ್ಕೃತಿಯನ್ನು ಒಳಗಿನಿಂದ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದ ಅವರು, ಜಾನಪದರು ಯೋಚನೆ ಮಾಡುವ ಕ್ರಮಗಳು ವೈವಿಧ್ಯಮಯವಾಗಿವೆ. ಆದರೆ ಇಂದು ಒಂದೇ ರೀತಿಯ ಆಲೋ ಚನೆಗಳು ಸತ್ಯ ಎಂಬುದಾಗಿದೆ. ಇದನ್ನು ಒಡೆಯಲು ಇರುವ ಏಕೈಕ ದಾರಿ ಜಾನಪದ. ಜಾನಪದದಲ್ಲಿ ಒಂದು ಸತ್ಯ ಎಂಬುದಿಲ್ಲ. ಏಕಕಾಲ ಬಹುಮುಖಿ ಯೋಚನೆಗಳು ಇರುವ ವ್ಯವಸ್ಥೆ ನಮ್ಮ ಜಾನಪದಲ್ಲಿ ಸಿಗುತ್ತದೆ ಎಂದರು.

ಜಾನಪದ ಅಧ್ಯಯನವನ್ನು ಕೇವಲ ಶೈಕ್ಷಣಿಕ ಎಂಬುದಾಗಿ ಭಾವಿಸದೆ ಬದು ಕಿನ ಭಾಗ ಎಂದು ತಿಳಿದುಕೊಳ್ಳಬೇಕು. ಆಗ ಅದರಿಂದ ನಮಗೆ ಪ್ರಯೋಜನ ದೊರೆಯಲು ಸಾಧ್ಯವಾಗುತ್ತದೆ. ಭಾರತದಲ್ಲಿ ಮೊತ್ತ ಮೊದಲು ಜಾನಪದ ಶೈಕ್ಷಣಿಕ ಶಿಸ್ತು ಆದದ್ದು ಕರ್ನಾಟಕದಲ್ಲಿ. ಬಳಿಕ ಅದು ಕೊಲ್ಕತ್ತದಲ್ಲಿ ಆರಂಭ ಗೊಂಡು ಮುಂದೆ ದೇಶದ ಎಲ್ಲ ವಿವಿಗಳಿಗೆ ವಿಸ್ತಾರಗೊಂಡಿತು ಎಂದು ಅವರು ತಿಳಿಸಿದರು.

ಇಂದು ಜಾನಪದ ಅಧ್ಯಯನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜಾನ ಪದದ ಕುರಿತು ಜಗತ್ತಿನಲ್ಲಿ ನಡೆಯುವ ಅಧ್ಯಯನಕ್ಕಿಂತ ಭಾರತದಲ್ಲಿ ನಡೆ ಯುವ ಕೆಲಸ ಬಹಳ ಮುಖ್ಯವಾಗುತ್ತದೆ. ಭಾರತದಲ್ಲಿ ವೌಖಿಕ ಸಂಸ್ಕೃತಿ ಈಗಲೂ ಜೀವಂತವಾಗಿದೆ. ಈ ಸಂಸ್ಕೃತಿ ಜೀವಂತವಾಗಿರುವ ಜಗತ್ತಿನ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದು. ಯುರೋಪಿನ ಯಾವುದೇ ದೇಶದಲ್ಲಿ ಇದು ಇಲ್ಲವಾಗಿದೆ ಎಂದು ಅವರು ಹೇಳಿದರು.

ಜಾಗತೀಕರಣ ಹಾಗೂ ಆಧುನೀಕರಣಗಳ ನಡುವೆ ಜಾನಪದ ಬದಲಾವಣೆ ಕಾಣುತ್ತ ಹೊಸ ರೂಪವನ್ನು ತಾಳುತ್ತಿದೆ. ಅದನ್ನು ಹಿಡಿದು ಇಡುವ ಕೆಲಸ ಮಾಡಬೇಕು. ಆ ಮೂಲಕ ನಮ್ಮ ದೇಶಿ ಜ್ಞಾನವನ್ನು ಕಾಪಾಡಬೇಕು ಎಂದ ಅವರು, ಬರಹ, ಮಾತು, ಆಲೋಚನೆಗಳು ಕೇವಲ ಸಾಮಾಗ್ರಿಗಳಲ್ಲ. ಮೊದಲು ಜಾನಪದ ಅಧ್ಯಯನ ಎಂಬುದು ಸಾಮಾಗ್ರಿ ಸಂಗ್ರಹವಾಗಿದ್ದರೆ ನಂತರ ಸಾಮಾಗ್ರಿಗಳ ಮೂಲಕ ಸಂದೇಶ ಪಡೆಯುವುದು ಆಯಿತು. ಈಗ ಆ ಸಾಮಾಗ್ರಿಗಳ ಸಂದೇಶದಿಂದ ಸಂಬಂಧಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಿದ್ದರು. ಫಾಸಿಲ್ಸ್‌ನ ರಾಜ್ಯ ಕಾರ್ಯದರ್ಶಿ ಡಾ.ರಾಜಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿದರು. ಸಹ ಸಂಯೋಜಕ ಡಾ.ಅಶೋಕ್ ಆಳ್ವ ವಂದಿಸಿದರು. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News