ಆಯುಷ್ - ಆಧುನಿಕ ವೈದ್ಯಪದ್ಧತಿ ಜೋಡಿಸುವ ನಿರ್ಧಾರಕ್ಕೆ ವಿರೋಧ
ಚೆನ್ನೈ, ಫೆ.10: ಆಯುಷ್ ಚಿಕಿತ್ಸಾ ಪದ್ಧತಿಯನ್ನು ಆಧುನಿಕ ವೈದ್ಯಪದ್ಧತಿಯ ಜೊತೆ ಜೋಡಿಸುವುದರಿಂದ ರೋಗಿಯ ಸುರಕ್ಷತೆಗೆ ತೊಂದರೆಯಾಗಲಿದೆ ಎಂದು ವೈದ್ಯಕೀಯ ಸಂಘಟನೆಯೊಂದು ತಿಳಿಸಿದೆ.
ಸಂಸದೀಯ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿರುವ ‘ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ’ಯಲ್ಲಿ , ಆಯುಷ್ ಚಿಕಿತ್ಸಾ ಪದ್ಧತಿ ಅಧ್ಯಯನ ಮಾಡಿದವರು ‘ಸೇತುಬಂಧ’ ಶಿಕ್ಷಣ ಪಡೆದು ಆಧುನಿಕ ವೈದ್ಯಪದ್ಧತಿಯನ್ನು ಆರಂಭಿಸಲು ಅವಕಾಶ ಮಾಡಿಕೊಡುವ ಪ್ರಸ್ತಾಪವಿದೆ. ಆಧುನಿಕ ಹಾಗೂ ಸಾಂಪ್ರದಾಯಿಕ(ಆಯುಷ್) ಚಿಕಿತ್ಸಾ ಪದ್ಧತಿಯನ್ನು ಹೋಲಿಸಲಾಗದು. ಇವೆರಡು ಪದ್ಧತಿಯನ್ನೂ ಮಿಶ್ರ ಮಾಡುವ ಕ್ರಮ ಸರಿಯಲ್ಲ. ಇದರಿಂದ ರೋಗಿಯ ಸುರಕ್ಷತೆಗೆ ಅಪಾಯ ಬರಲಿದೆ ಎಂದು ‘ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್(ಇಂಡಿಯಾ)’ನ ತಮಿಳುನಾಡು ಘಟಕಾಧ್ಯಕ್ಷ ಡಾ ಎಸ್. ಗುರುಶಂಕರ್ ತಿಳಿಸಿದ್ದಾರೆ. ಅಲ್ಲದೆ ಎಂಬಿಬಿಎಸ್ ಪರೀಕ್ಷೆ ತೇರ್ಗಡೆಯಾಗುವವರಿಗೆ ‘ರಾಷ್ಟ್ರೀಯ ಪರವಾನಿಗೆ ಪರೀಕ್ಷೆ’ ನಡೆಸುವ ನಿರ್ಧಾರವನ್ನು ವಿರೋಧಿಸಿದ ಅವರು, ಇದು ಅನವಶ್ಯಕ ಕ್ರಮವಾಗಿದೆ ಎಂದಿದ್ದಾರೆ.
ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ, ಹೋಮಿಯೋಪಥಿ ಮುಂತಾದವುಗಳು ಆಯುಷ್ ಚಿಕಿತ್ಸಾ ಪದ್ಧತಿಯಡಿ ಬರುತ್ತವೆ.