×
Ad

ಹಾಜರಾತಿ ಕಡ್ಡಾಯ ನಿಯಮ ವಿದ್ಯಾರ್ಥಿಗಳ ಹಿತಾಸಕ್ತಿಗೆ ಪೂರಕ: ಬಾಂಬೆ ಹೈಕೋರ್ಟ್

Update: 2018-02-10 23:30 IST

ಮುಂಬೈ, ಫೆ.10: ವಿದ್ಯಾರ್ಥಿಗಳಿಗೆ ಕನಿಷ್ಟ ಶೇ.50 ಹಾಜರಾತಿ ಕಡ್ಡಾಯಗೊಳಿಸಿರುವ ಮುಂಬೈ ವಿಶ್ವವಿದ್ಯಾನಿಲಯದ ಆದೇಶವು ವಿದ್ಯಾರ್ಥಿಗಳ ಹಿತಾಸಕ್ತಿಗೆ ಪೂರಕವಾಗಿದ್ದು , ಈ ನಿಯಮದಿಂದ ಯಾವುದೇ ಅನುಚಿತ ವಿನಾಯಿತಿ ನೀಡಲು ವಿವಿಯ ಉನ್ನತ ಅಧಿಕಾರಿಗಳಿಗೂ ಅಧಿಕಾರವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.

ಮುಂಬೈ ವಿವಿಯ ದೂರು ವಿಭಾಗದ ವಿರುದ್ಧ ಕಾಂಡಿವಿಲಿಯ ಕಾಲೇಜೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಮುಂಬೈ ಹೈಕೋರ್ಟ್ ಈ ಆದೇಶ ಜಾರಿಗೊಳಿಸಿದೆ.

ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳ ವಿರುದ್ಧ ಮುಂಬೈ ವಿವಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಟ ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೂ ಕೆಲವೊಮ್ಮೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆ ಎಂದು ಕಾಂಡಿವಿಲಿಯ ಬಿ.ಕೆ.ಶ್ರಾಫ್ ಕಾಲೇಜು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯ್ ಹಾಗೂ ಬಿ.ಪಿ.ಕೊಲಾಬಾವಾಲಾ ಅವರಿದ್ದ ನ್ಯಾಯಪೀಠವು, ವಿದ್ಯಾರ್ಥಿಗಳ ಹಾಜರಾತಿ ಕುರಿತು ವಿವೇಚಿಸುವ ಅಧಿಕಾರವನ್ನು ಸಂಬಂಧಿತ ಕಾಲೇಜುಗಳ ಹಾಜರಾತಿ ಸಮಿತಿ ಹಾಗೂ ಪ್ರಾಂಶುಪಾಲರು ಮಾತ್ರ ಹೊಂದಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ತಾನು ಪರಮೋಚ್ಛ ಅಪೀಲು ಪ್ರಾಧಿಕಾರ ಎಂದ ವಿವಿ ಹೇಳಿಕೊಳ್ಳುವಂತಿಲ್ಲ ಎಂದು ತಿಳಿಸಿದೆ. ಶೇ.50ಕ್ಕೂ ಕಡಿಮೆ ಹಾಜರಾತಿ ಪ್ರಮಾಣ ಹೊಂದಿದ್ದ ಸುಮಾರು 100 ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ 2017ರ ಮಾರ್ಚ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತು. ಇವರಲ್ಲಿ 38 ಮಂದಿ ವಿವಿಯ ದೂರು ವಿಭಾಗಕ್ಕೆ ಮನವಿ ಸಲ್ಲಿಸಿದ್ದು,ಇವರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ವಿವಿ ಸೂಚಿಸಿತ್ತು. ಇದನ್ನು ವಿರೋಧಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿವಿಯು ಪರಮೋಚ್ಛ ಅಪೀಲು ಪ್ರಾಧಿಕಾರ ಎಂಬುದನ್ನು ಒಪ್ಪಲಾಗದು. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲು ಸಂಬಂಧಿತ ಕಾಲೇಜಿನ ಸಮಿತಿಗೆ ಅಥವಾ ಪ್ರಾಂಶುಪಾಲರಿಗೆ ಮಾತ್ರ ಅಧಿಕಾರವಿದೆ ಎಂದು ಹೈಕೋರ್ಟ್‌ನ ನ್ಯಾಯಪೀಠದ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News