2ನೇ ಟೆಸ್ಟ್ ಧನಂಜಯ ದಾಳಿಗೆ ತತ್ತರಿಸಿದ ಬಾಂಗ್ಲಾ

Update: 2018-02-10 18:11 GMT

ಢಾಕಾ, ಫೆ.10: ಬಾಂಗ್ಲಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡ 215ರನ್‌ಗಳ ಜಯ ಗಳಿಸಿದ್ದು, 2 ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಟೆಸ್ಟ್‌ನ ಮೂರನೇ ದಿನವಾಗಿರುವ ಶನಿವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 339 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ ಅಫ್ ಸ್ಪಿನ್ನರ್ ಅಖಿಲಾ ಧನಂಜಯ್(24ಕ್ಕೆ 5) ಮತ್ತು ರಂಗನ ಹೆರಾತ್(49ಕ್ಕೆ 4) ದಾಳಿಗೆ ಸಿಲುಕಿ29.3 ಓವರ್‌ಗಳಲ್ಲಿ 123ಗಳಿಗೆ ಆಲೌಟಾಗಿದೆ.

 ಬಾಂಗ್ಲಾ ತಂಡದ ಪರ ಮೊಮಿನುಲ್ ಹಕ್ (33) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ಹಕ್ ಅವರನ್ನು ಹೊರತುಪಡಿಸಿದರೆ ಮುಶ್ಫಿಕುರ್ರಹ್ಮಾನ್ (25),ಇಮ್ರುಲ್ ಕೈಸ್ (17), ವಿಕೆಟ್ ಕೀಪರ್ ಲಿಟ್ಟನ್ ದಾಸ್(12) ಎರಡಂಕೆಯ ಕೊಡುಗೆ ನೀಡಿದರು.

ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 222 ರನ್‌ಗಳಿಗೆ ಆಲೌಟಾಗಿತ್ತು. ಬಳಿಕ ಬಾಂಗ್ಲಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 110 ರನ್‌ಗಳಿಗೆ ನಿಯಂತ್ರಿಸಿ 112 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ 73.5 ಓವರ್‌ಗಳಲ್ಲಿ 226 ರನ್‌ಗಳಿಗೆ ಆಲೌಟಾಗಿತ್ತು. ರೋಶನ್ ಡಿ ಸಿಲ್ವ ಔಟಾಗದೆ 70ರನ್ ಗಳಿಸಿದ್ದರು. 9ನೇ ವಿಕೆಟ್‌ಗೆ ಸುರಂಗ್ ಲಕ್ಮಲ್ ಅವರೊಂದಿಗೆ 48 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಿದ್ದರು. ಎರಡನೇ ದಿನದಾಟದಂತ್ಯಕ್ಕೆ ಶ್ರೀಲಂಕಾ ತಂಡ 8 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿ 312 ರನ್‌ಗಳ ಮುನ್ನಡೆ ಸಾಧಿಸಿತ್ತು. ಔಟಾಗದೆ 58 ರನ್ ಗಳಿಸಿದ್ದ ರೋಶನ್ ಡಿ ಸಿಲ್ವ ಮತ್ತು 7 ರನ್ ಗಳಿಸಿದ್ದ ಲಕ್ಮಲ್ ಬ್ಯಾಟಿಂಗ್ ಮುಂದುವರಿಸಿ 9ನೇ ವಿಕೆಟ್‌ಗೆ 46 ರನ್‌ಗಳ ಕೊಡುಗೆ ನೀಡಿದರು. 21 ರನ್ ಗಳಿಸಿದ್ದ ಲಕ್ಮಲ್‌ರನ್ನು ಪೆವಿಲಿಯನ್‌ಗೆ ಅಟ್ಟಿದ ತೈಜುಲ್ ಇಸ್ಲಾಂ ಇವರ ಜೊತೆಯಾಟವನ್ನು ಮುರಿದರು. ಅಂತಿಮವಾಗಿ ಶ್ರಿಲಂಕಾ ಎರಡನೇ ಇನಿಂಗ್ಸ್‌ನ್ನು 226 ರನ್‌ಗಳಿಗೆ ಕೊನೆಗೊಳಿಸಿತು.

ಡಿ ಸಿಲ್ವ ಮೊದಲ ಇನಿಂಗ್ಸ್‌ನಲ್ಲಿ 56 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ಅರ್ಧಶತಕ ದಾಖಲಿಸಿದ್ದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಚಿತ್ತಗಾಂಗ್‌ನಲ್ಲಿ ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಎರಡು ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ಶ್ರೀಲಂಕಾ ಗೆದ್ದುಕೊಂಡಿದೆ. ಉಭಯ ತಂಡಗಳು ಫೆ.15ರಂದು ನಡೆಯಲಿರುವ ಎರಡು ಟ್ವೆಂಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News