ಸೊಹ್ರಾಬುದ್ದೀನ್-ಕೌಸರ್-ಪ್ರಜಾಪತಿ ನಕಲಿ ಎನ್ ಕೌಂಟರ್: ಆರೋಪಿಗಳಿಗೆ ಆರಾಮ, ತನಿಖಾಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್!

Update: 2018-02-11 17:20 GMT

ಹೊಸದಿಲ್ಲಿ, ಫೆ.11: ಸೊಹ್ರಾಬುದ್ದೀನ್-ಕೌಸರ್ ಬಿ-ತುಲಸೀರಾಮ್ ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣದ ಮಾಜಿ ತನಿಖಾಧಿಕಾರಿ ಸಂದೀಪ್ ತಾಮ್ಗಡ್ಗೆ ಕಳೆದ ಮೂರು ವರ್ಷಗಳಿಂದ ಹಲವು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಅದೂ ಕೂಡ ತಮ್ಮದೇ ಏಜೆನ್ಸಿಯಾದ ಸಿಬಿಐಯಿಂದ.

ಸುಳ್ಳು ಸಾಕ್ಷಿಗಳ ಮೂಲಕ ತನ್ನ ಮಾಜಿ ತನಿಖಾಧಿಕಾರಿಯನ್ನು ಸಿಲುಕಿಸಲು ಸಿಬಿಐ ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಈ ಬಗ್ಗೆ thewire.in ವರದಿಯೊಂದನ್ನು ಪ್ರಕಟಿಸಿದ್ದು ಸೊಹ್ರಾಬುದ್ದೀನ್-ಕೌಸರ್-ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣದ ಆರೋಪಿಗಳು ಆರಾಮವಾಗಿದ್ದು, ಪ್ರಕರಣದ ತನಿಖಾಧಿಕಾರಿಯೇ ಕ್ರಿಮಿನಲ್ ಕೇಸುಗಳನ್ನು ಎದುರಿಸುವಂತಾಗಿದ್ದು ವಿಪರ್ಯಾಸ ಎಂದಿದೆ.

ನಾಗಾಲ್ಯಾಂಡ್ ಕೇಡರ್‌ಗೆ ಸೇರಿದ 2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಂದೀಪ್ ಪರಿಶಿಷ್ಟ ಜಾತಿಯವರಾಗಿದ್ದು, ಮಹಾರಾಷ್ಟ್ರದ ನಾಗ್ಪುರ್ ನವರು. ಸಂದೀಪ್ ತಾಮ್ಗಡ್ಗೆ 2011ರಿಂದ 2015ರ ವರೆಗೆ ಸಿಬಿಐಯಲ್ಲಿ ಹಲವು ಹುದ್ದೆಗಳನ್ನು ಹೊಂದಿದ್ದರು. ಇವುಗಳಲ್ಲಿ ಮುಂಬೈ ಸಿಬಿಐ ವಿಭಾಗದ ವಿಶೇಷ ಕ್ರೈಂ ಬ್ರಾಂಚ್‌ನ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯೂ ಒಂದು. 2011ರಲ್ಲಿ ತಾಮ್ಗಡ್ಗೆ ಸೊಹ್ರಾಬುದ್ದೀನ್ ಮತ್ತು ಕೌಸರ್ ಬಿ ಹತ್ಯೆ ಮತ್ತು ಆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ತುಲಸಿರಾಮ್ ಪ್ರಜಾಪತಿಯ ಹತ್ಯೆಯ ಪ್ರಕರಣದ ತನಿಖೆ ನಡೆಸುತ್ತಿದ್ದರು. ಹತ್ಯೆಗೂ ಮೊದಲು ಕೌಸರ್ ಬಿ ಮೇಲೆ ಅತ್ಯಾಚಾರ ನಡೆದಿತ್ತು. ನಂತರ ಆಕೆಯ ದೇಹವನ್ನು ಸುಟ್ಟು ಬಿಸಾಡಲಾಗಿತ್ತು ಎಂದು ಸಿಬಿಐ ತನ್ನ ದೂರಿನಲ್ಲಿ ಉಲ್ಲೇಖಿಸಿತ್ತು.

ಇಶ್ರಾತ್ ಜಹಾನ್ ಹತ್ಯೆ ಪ್ರಕರಣದ ತನಿಖೆಯನ್ನೂ ನಡೆಸುತ್ತಿದ್ದ ಸಂದೀಪ್ ತಾಮ್ಗಡ್ಗೆ ಆ ಸಂದರ್ಭ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಆಪ್ತರಾಗಿದ್ದ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳೆಂದು ಹೆಸರಿಸಿ ಎರಡು ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದರು.

ಈ ಹತ್ಯೆಗಳಿಗೆ ಸಂಬಂಧಪಟ್ಟಂತೆ ಸಂದೀಪ್ ತಾಮ್ಗಡ್ಗೆ ಅಮಿತ್ ಶಾ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿದ್ದರು. 2012ರ ಜನವರಿಯಲ್ಲಿ ಪ್ರಜಾಪತಿ ಹತ್ಯೆಗೆ ಸಂಬಂಧಿಸಿದ ಹಾಗು 2013ರ ಅಕ್ಟೋಬರ್‌ನಲ್ಲಿ ಇಶ್ರಾತ್ ಜಹಾನ್ ಹತ್ಯೆಯಲ್ಲಿ ಶಾ ಪಾತ್ರವನ್ನು ಪ್ರಶ್ನಿಸಿ ವಿಚಾರಣೆ ನಡೆಸಲಾಗಿತ್ತು.

ಶಾ ಹಾಗೂ ಇತರರನ್ನು ವಿಚಾರಣೆ ನಡೆಸುವ ಜೊತೆಗೆ ತಾಮ್ಗಡ್ಗೆ, ನಡೆಯುತ್ತಿರುವ ತನಿಖೆಯ ಸ್ಥಿತಿಗತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಒಪ್ಪಿಸುತ್ತಿದ್ದರು. ಈ ಪ್ರಕರಣದ ತನಿಖೆಯ ವಿಚಾರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಪೀಠದಲ್ಲಿ ಯಾವ ನ್ಯಾಯಾಧೀಶರು ಕೂಡಾ ಸಂದೀಪ್ ತಾಮ್ಗಡ್ಗೆ ಕಾರ್ಯವೈಖರಿ ಬಗ್ಗೆ ಅತೃಪ್ತಿ ಹೊಂದಿರಲಿಲ್ಲ.

ಆದರೆ 2014ರ ಎಪ್ರಿಲ್‌ನಲ್ಲಿ ಸಿಬಿಐ ತಾಮ್ಗಡ್ಗೆಯನ್ನು ಗುಜರಾತ್ ಹತ್ಯಾ ಪ್ರಕರಣಗಳ ತನಿಖೆಯಿಂದ ಹಿಂಪಡೆದುಕೊಂಡಿತು. ಸದ್ಯ ಪ್ರಮುಖ ಸಿಬಿಐ ತನಿಖೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ತನಿಖೆಯನ್ನು ಎದುರಿಸುತ್ತಿರುವ ರಂಜಿತ್ ಶಾರನ್ನು ಸಂದೀಪ್ ತಮ್ಗಡ್ಗೆಯಿಂದ ತೆರವಾದ ಸ್ಥಾನಕ್ಕೆ ನೇಮಿಸಲಾಗಿತ್ತು. ಸಂದೀಪ್ ತಾಮ್ಗಡ್ಗೆಯನ್ನು ತನಿಖೆಯಿಂದ ಹಿಂಪಡೆದ ಆರು ತಿಂಗಳಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಅಮಿತ್ ಶಾರನ್ನು ಪ್ರಕರಣದಿಂದ ದೋಷಮುಕ್ತಿಗೊಳಿಸಿತು. 2015 ಜುಲೈಯಲ್ಲಿ ಸಂದೀಪ್ ತಾಮ್ಗಡ್ಗೆಗೆ ಒದಗಿಸಲಾಗಿದ್ದ ಭದ್ರತಾ ರಕ್ಷಣೆಯನ್ನು ಹಿಂಪಡೆಯಲಾಯಿತು. 2015ರ ಅಕ್ಟೋಬರ್‌ನಲ್ಲಿ ಅವರನ್ನು ನಾಗಾಲ್ಯಾಂಡ್ ಕೆೀಡರ್‌ಗೆ ವಾಪಸ್ ಕಳುಹಿಸಲಾಯಿತು.

ಎರಡು ಸ್ವತಂತ್ರ ಸಾಕ್ಷಿಗಳು ನಾಗಪುರ ನ್ಯಾಯಾಲಯ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಸಂದೀಪ್ ತಾಮ್ಗಡ್ಗೆ ವಿರುದ್ಧ ಭಷ್ಟಾಚಾರ ಪ್ರಕರಣದಡಿ ದೂರು ದಾಖಲಿಸಲು ಸುಳ್ಳು ಹೇಳಿಕೆ ನೀಡುವಂತೆ ಸಿಬಿಐ ತಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

ನಾಗಾಲ್ಯಾಂಡ್‌ಗೆ ಕಳುಹಿಸಲಾದ ನಂತರ ಸಿಬಿಐ ತಾಮ್ಗಡ್ಗೆ ನಾಗಪುರದ ಸಿಬಿಐ ವಿಭಾಗದಲ್ಲಿ ಎಸ್‌ಪಿ, ಎಸಿಬಿಯಾಗಿದ್ದ ವೇಳೆ ತನಿಖೆ ನಡೆಸಿದ್ದ ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಿಬಿಐ, ತಮ್ಗಡ್ಗೆ ವಿರುದ್ಧವೇ ತನಿಖೆಯನ್ನು ಆರಂಭಿಸಿದೆ. ಈ ಎರಡು ಪ್ರಕರಣಗಳಿಗೂ ಗುಜರಾತ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈ ಪ್ರಕರಣಗಳ ಮೂಲಕ ಸಿಬಿಐ ಸಂದೀಪ್ ತಾಮ್ಗಡ್ಗೆಯನ್ನು ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಸಾಕ್ಷಿಗಳು ಲಭ್ಯವಾಗಿದೆ ಎಂದು thewire.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News