ಚಾರ್ಮಾಡಿ: 60 ಅಡಿ ಅಳಕ್ಕೆ ಬಿದ್ದ ಬೊಲೇರೊ ಕಾರು; ಮೂವರಿಗೆ ಗಾಯ

Update: 2018-02-12 06:51 GMT

ಬೆಳ್ತಂಗಡಿ, ಫೆ.12: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಕಾರೊಂದು ರಸ್ತೆ ಬದಿಯ 60 ಅಡಿಯ ಕಮರಿಗೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಈ ವೇಳೆ ಕಾರಿನಲ್ಲಿ 9 ಮಂದಿಯ ಪೈಕಿ ಮೂವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರ್ಟಗಿಯಿಂದ ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಧರ್ಮಸ್ಥಳಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಗಾಯಗೊಂಡವರನ್ನು ಕಾರ್ಟಗಿ ನಿವಾಸಿಗಳಾದ ಬೊಲೆರೋ ಚಾಲಕ ಶ್ರೀಧರ್(38), ಶರಣಪ್ಪ(34), ತೇಜಶ್ವಿನಿ(9) ಎಂದು ಗುರುತಿಸಲಾಗಿದೆ. ರಾತ್ರಿ 1 ಗಂಟೆ ಸುಮಾರಿಗೆ ಇವರು ಸಂಚರಿಸುತ್ತಿದ್ದ ಬೊಲೆರೋ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ನಿಯಂತ್ರಣ ತಪ್ಪಿಪ್ರಪಾತಕ್ಕೆ ಬಿದ್ದಿದೆ. ಇದೇ ಸಂದರ್ಭ ಈ ಕಾರಿನ ಹಿಂದೆ ಬರುತ್ತಿದ್ದ ಮುಂಡಾಜೆಯ ಗ್ರಾಪಂ ಸದಸ್ಯರಾದ ಅಬ್ದುಲ್ ಅಝೀಝ್, ಹಕೀಂ ಕಾಜೂರು, ಬಶೀರ್, ಹಮೀದ್ ಉಜಿರೆ, ಉಮರ್ ಮುಂಡಾಜೆ ಎಂಬವರಿದ್ದ ಕಾರಿನವರು ಇದನ್ನು ಗಮನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಇವರು ಬೊಲೆರೊದೊಳಗೆ ಸಿಲುಕಿದ್ದವರನ್ನು ಹಗ್ಗದ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.

60 ಅಡಿಗೆ ಬಿದ್ದ ಬೊಲೋರ ಕಾರು ಸಂಪೂರ್ಣ ಜಖಂಗೊಂಡಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News