×
Ad

ದಲಿತ ವಿದ್ಯಾರ್ಥಿ ಹತ್ಯೆ ಪ್ರಕರಣ: ಹಿಂಸೆಗೆ ತಿರುಗಿದ ಪ್ರತಿಭಟನೆ

Update: 2018-02-12 21:34 IST

ಅಲಹಾಬಾದ್,ಫೆ.12: ನಗರದ 26 ವರ್ಷ ವಯಸ್ಸಿನ ಕಾನೂನು ವಿದ್ಯಾರ್ಥಿಯನ್ನು ದುಷ್ಕರ್ಮಿಗಳ ಗುಂಪೊಂದು ಹತ್ಯೆಗೈದ ಘಟನೆಯನ್ನು ಖಂಡಿಸಿ ಭುಗಿಲೆದ್ದ ಪ್ರತಿಭಟನೆಯು ಸೋಮವಾರ ಹಿಂಸಾರೂಪಕ್ಕೆ ತಿರುಗಿದ್ದು, ಉದ್ರಿಕ್ತ ಜನರು ಕಲ್ಲು ತೂರಾಟ ನಡೆಸಿದ್ದು, ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನಕಾರರೆಲ್ಲರೂ ಅಲಹಾಬಾದ್ ವಿವಿ ವಿದ್ಯಾರ್ಥಿಗಳಾಗಿದ್ದು, ಅವರನ್ನು ಚದುರಿಸಲು ಗಲಭೆ ನಿಗ್ರಹ ಪೊಲೀಸರ ನೆರವನ್ನು ಪಡೆಯಲಾಯಿತು.

 ಕಾನೂನು ವಿದ್ಯಾರ್ಥಿ ದಿಲೀಪ್ ಸರೋಜ್, ಹೊಟೇಲೊಂದನ್ನು ಪ್ರವೇಶಿಸುತ್ತಿದ್ದಾಗ ಆತನಿಗೆ ಮುಖ್ಯ ಆರೋಪಿ ವಿಜಯ್ ಶಂಕರ್ ಸಿಂಗ್, ಆಕಸ್ಮಿಕವಾಗಿ ಢಿಕ್ಕಿ ಹೊಡೆದಿದ್ದ. ಇದು ವಾಗ್ವಾದಕ್ಕೆ ಕಾರಣವಾಗಿ, ವಿಜಯ್ ಶಂಕರ್‌ಸಿಂಗ್ ಹಾಗೂ ಮತ್ತಾತನ ಸಹಚರರು ದಿಲೀಪ್ ಸರೋಜ್‌ನನ್ನು ಹಾಕಿ ಸ್ಟಿಕ್, ಕಬ್ಬಿಣದ ರಾಡ್ ಹಾಗೂ ಇಟ್ಟಿಗೆಗಳಿಂದ ಥಳಿಸಿದ್ದರು. ಮಾರಣಾಂತಿಕವಾಗಿ ಗಾಯಗೊಂಡ ದಿಲೀಪ್ ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಈ ಬರ್ಬರ ಹತ್ಯೆಯನ್ನು ದಾರಿಹೋಕನೊಬ್ಬ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದನು.

 ಘಟನೆಗೆ ಸಂಬಂಧಿಸಿ ಕಾಲಿಕಾ ರೆಸ್ಟಾರೆಂಟ್‌ನ ವೇಟರ್ ಮುನ್ನಾ ಚೌಹಾಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮುನ್ನಾ ಚೌಹಾಣ್, ದಿಲೀಪ್‌ನ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಹೊಟೇಲ್‌ನ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಚೌಹಾಣ್‌ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ ವೇಟರ್ ಮುನ್ನಾಚೌಹಾಣ್, ಆನಂತರ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಇನ್ನೋರ್ವ ಮುಖ್ಯ ಆರೋಪಿ ನಾಪತ್ತೆಯಾಗಿದ್ದು, ಆತ ವಾರಣಾಸಿಯಲ್ಲಿ ತಲೆಮರೆಸಿಕೊಂಡಿರಬೇಕೆಂದು ಶಂಕಿಸಲಾಗಿದೆ.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News