ಭಿಕ್ಷೆ ಬೇಡಿ ಶೌಚಾಲಯ ಕಟ್ಟಿಸಿದ ಮಹಿಳೆ!

Update: 2018-02-13 05:29 GMT
ಸಾಂದರ್ಭಿಕ ಚಿತ್ರ

  ಪಾಟ್ನಾ,ಫೆ.12: ಬಡ ಮಹಿಳೆಯೊಬ್ಬರು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ತನ್ನ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಿರುವುದು ಭಾರೀ ಗಮನಸೆಳೆದಿದೆ. ಜನಸಾಮಾನ್ಯರಿಂದ ಆಕೆಗೆ ವ್ಯಾಪಕ ಅನುಕಂಪ ವ್ಯಕ್ತವಾಗಿದೆ.

 ಬಿಹಾರದ ಸುಪೌಲ್ ಜಿಲ್ಲೆಯ ಪಾತ್ರ ಉತ್ತರ ಗ್ರಾಮದ ನಿವಾಸಿ ಆಮಿನಾ ಖತೂಮ್ ಎಂಬವರು ಶೌಚಾಲಯ ನಿರ್ಮಿಸುವುದಕ್ಕಾಗಿ ನೆರೆಹೊರೆಯ ಗ್ರಾಮಗಳಲ್ಲಿ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಶೌಚಾಲಯ ನಿರ್ಮಾಣಕ್ಕಾಗಿ ಕೆಲಸ ಮಾಡಿದ್ದ ಓರ್ವ ಮೇಸ್ತ್ರಿ ಹಾಗೂ ಇನ್ನೋರ್ವ ಕಾರ್ಮಿಕ ಇಬ್ಬರೂ ಆಮಿನಾರ ಬದ್ಧತೆಗೆ ಮಾರುಹೋಗಿ, ಆಕೆಯಿಂದ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದ್ದಾರೆ. ಈ ವಿಶಿಷ್ಟ ಪ್ರಯತ್ನಕ್ಕಾಗಿ, ಆಮಿನಾರನ್ನು ಜಿಲ್ಲಾಡಳಿತವು ರವಿವಾರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿತು.

 40ರ ಹರೆಯದಲ್ಲಿಯೇ ವಿಧವೆಯಾದ ಆಮಿನಾ ಓರ್ವ ವಯಸ್ಸಿನ ಬಾಲಕನ ತಾಯಿಯಾಗಿದ್ದಾರೆ. ಜೀವನೋಪಾಯಕ್ಕಾಗಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ವ್ಯಾಪಕ ಪ್ರಚಾರದ ಹೊರತಾಗಿಯೂ ಶೌಚಾಲಯ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ಕೋರಿ ತಾನು ಬ್ಲಾಕ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ತನ್ನ ಮನವಿಯನ್ನು ನಿರಾಕರಿಸಿದ್ದರು. ಕೊನೆಗೆ ಬೇರೆ ದಾರಿ ಕಾಣದೆ ತಾನು ಭಿಕ್ಷಾಟನೆ ಮಾಡಿ, ಅದರಿಂದ ಸಂಗ್ರಹವಾದ ಹಣದಲ್ಲಿ ಶೌಚಾಲಯ ನಿರ್ಮಿಸಿರುವುದಾಗಿ ಆಮಿನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News