ಪತಿಯನ್ನು ಕಳೆದುಕೊಂಡ, ಪರಿತ್ಯಕ್ತ ಮಹಿಳೆಯರಿಗೂ ಸಾಲ ಸೌಲಭ್ಯ: ಶಾಸಕ ಲೋಬೋ

Update: 2018-02-13 09:59 GMT

ಮಂಗಳೂರು, ಫೆ.13: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಪತಿಯನ್ನು ಕಳೆದುಕೊಂಡ (ವಿಧವೆಯರು)ಹಾಗೂ ಪತಿಯಿಂದ ಪರಿತ್ಯಕ್ತ (ಡೈವೋರ್ಸಿ) ಮಹಿಳೆಯರಿಗೂ ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಸೌಲಭ್ಯವನ್ನು ಒದಗಿಸುವ ಈ ಹೊಸ ಯೋಜನೆ ಈ ವರ್ಷದಿಂದ ಜಾರಿಗೊಳ್ಳಲಿದೆ ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದರು.

ನಗರದ ಪುರಭವನದಲ್ಲಿ ಇಂದು ನಿಗಮದ ವಿವಿಧ ಯೋಜನೆಗಳಡಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ವಿಧವೆಯರು ಹಾಗೂ ಡೈವೋರ್ಸಿ ಮಹಿಳೆಯರಿಗೆ ಜೀವನ ಸಾಗಿಸಲು ಅನುಕೂಲವಾಗುವಂತೆ ನಿಗಮದಿಂದ ಒಂದು ಲಕ್ಷ ರೂ. ಸಾಲ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರಡಿ ಶೇ. 50ರಷ್ಟು ಹಣ ಸಬ್ಸಿಡಿ ರೂಪದಲ್ಲಿರುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಸಕ್ತ ಪದವಿ ತರಗತಿಯಿಂದ ಒದಗಿಸಲಾಗುತ್ತಿರುವ ಅರಿವು ಯೋಜನೆಯಡಿ ನೆರವು ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಕಳೆದ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2,750 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒದಗಿಸಿದ್ದಾರೆ. ಇದರಲ್ಲಿ ಪ್ರಮುಖವಾದ ಯೋಜನೆ ಅರಿವು ಯೋಜನೆಯಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ಅಲ್ಪಸಂಖ್ಯಾತ ನಿಗಮದಡಿ ಅರಿವು ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ 1,10,000 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದರೆ, ಶ್ರಮ ಶಕ್ತಿ ಯೋಜನೆಯಡಿ 80,000 ಮಂದಿ ಆರ್ಥಿಕ ನೆರವನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಭಂಡಾರಿ ಮಾತನಾಡಿ, ಸ್ವಯಂ ಉದ್ಯೋಗ ಯೋಜನೆಯಡಿ 59 ಫಲಾನುಭವಿಗಳಿಗೆ 39.90 ಲಕ್ಷ ರೂ., ಶ್ರಮಶಕ್ತಿ ಯೋಜನೆಯಡಿ 314 ಫಲಾನುಭವಿಗಳಿಗೆ 78.50 ಲಕ್ಷ ರೂ., ಕಿರುಸಾಲ ಯೋಜನೆಯಡಿ 24 ಫಲಾನುಭವಿಗಳಿಗೆ 2.40 ಲಕ್ಷ ರೂ.ಗಳ ಸಾಲ ಹಾಗೂ ಸಹಾಯಧನ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

801 ಫಲಾನುಭವಿಗಳಿಗೆ 225.14 ಲಕ್ಷ ರೂ.ಗಳ ಸೌಲಭ್ಯ ವಿತರಣೆ

 ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ, ಶ್ರಮಶಕ್ತಿ, ಮೈಕ್ರೋ ಕಿರುಸಾಲ, ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಒಟ್ಟು 801 ಫಲಾನುಭವಿಗಳಿಗೆ 225.14 ಲಕ್ಷ ರೂ..ಗಳ ಸಾಲ, ಸಹಾಯಧನವನ್ನು ನೀಡಲಾಗುತ್ತಿದೆ. ಇದರಲ್ಲಿ (ಅರಿವು ಯೋಜನೆಯಡಿ ವಿದ್ಯಾರ್ಥಿಗಳಿಗೆ ನೆರವು ಹೊರತುಪಡಿಸಿ ಇತರ 315 ಫಲಾನುಭವಿಗಳಿಗೆ ಇಂದು ನಡೆದ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಕಾರ್ಪೊರೇಟರ್‌ಗಳಾದ ಲತೀಫ್, ಕೇಶವ ಮರೋಳಿ, ಆಶಾ ಡಿಸಿಲ್ವಾ, ಅಬ್ದುಲ್ ಅಝೀಝ್ ಕುದ್ರೋಳಿ, ಶೈಲಜಾ, ಜಿಲ್ಲಾ ಕೆಥೋಲಿಕ್ ಸಭಾದ ಅಧ್ಯಕ್ಷ ಅನಿಲ್ ಲೋಬೋ, ಡೆನ್ನಿಸ್ ಡಿಸಿಲ್ವಾ, ಹಮೀದ್ ಕಣ್ಣೂರು, ಟಿ.ಕೆ. ಸುಧೀರ್, ಸತೀಶ್ ಪೆಂಗಲ್ ಮೊದಲಾದವರು ಉಪಸ್ಥಿತರಿದ್ದರು.

ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಯೂನುಸ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News