×
Ad

ಶಾಲೆಗಳಲ್ಲಿ ಮಕ್ಕಳಿಗೆ ಮೋದಿ ಪಾಠ!

Update: 2018-02-13 19:46 IST

ಮುಂಬೈ, ಫೆ.13: ಸರಕಾರಿ ಅನುದಾನಿತ ಶಾಲೆಗಳಿಗೆ ಪೂರೈಸುವ ಸಲುವಾಗಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರವು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬರೆಯಲಾಗಿರುವ 1.5 ಲಕ್ಷ ಪುಸ್ತಕಗಳನ್ನು ಖರೀದಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ. ಪುಸ್ತಕಗಳಿಗಾಗಿ ಬೇಡಿಕೆಯನ್ನು ಕಳೆದ ತಿಂಗಳು ಇಡಲಾಗಿದ್ದು, ಈ ಪುಸ್ತಕಗಳನ್ನು ಒಂದರಿಂದ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ಪೂರಕ ಓದಿಗಾಗಿ ಬಳಸಲಾಗುವುದು ಎಂದು ಸರಕಾರದ ಪ್ರಕಟನೆಯಲ್ಲಿ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ. ಸರಕಾರವು ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನದ ಕುರಿತ ಪುಸ್ತಕಗಳನ್ನೂ ಖರೀದಿಸಿದೆ. ಆದರೆ ಅವುಗಳ ಪ್ರಮಾಣವು ಮೋದಿ ಪುಸ್ತಕಕ್ಕಿಂತ ಕಡಿಮೆಯಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಪ್ರಧಾನಿ ಮೋದಿ ಕುರಿತ 1,49,954 ಪುಸ್ತಕಗಳಿಗೆ ಬೇಡಿಕೆ ಇಡಲಾಗಿದ್ದರೆ ಮಹಾತ್ಮ ಗಾಂಧಿ ಕುರಿತ ಕೇವಲ 4,343 ಪುಸ್ತಕಗಳನ್ನು ಖರೀದಿಸಲು ಸರಕಾರ ಮುಂದಾಗಿದೆ. ಭಾರತದ ಪ್ರಥಮ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಜವಾಹರ್ ಲಾಲ್ ನೆಹರೂ ಕುರಿತ 1,635 ಪುಸ್ತಕಗಳನ್ನು ಖರೀದಿಸಲು ಸರಕಾರ ಮುಂದಾಗಿದೆ. ಜೊತೆಗೆ ಡಾ. ಬಿ.ಆರ್ ಅಂಬೇಡ್ಕರ್ ಕುರಿತ 79,388 ಪುಸ್ತಕಗಳು ಮತ್ತು ಮಾಜಿ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಕುರಿತ 76,713 ಪುಸ್ತಕಗಳಿಗೆ ಬೇಡಿಕೆ ಇಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ ಕುರಿತ 3,40,982 ಪುಸ್ತಕಗಳನ್ನು ರಾಜ್ಯ ಸರಕಾರವು ಖರೀದಿಸಲು ಮುಂದಾಗಿದ್ದು ಮಾಜಿ ರಾಷ್ಟ್ರಪತಿ ಹಾಗೂ ಖ್ಯಾತ ವಿಜ್ಞಾನಿ ಎ.ಪಿ.ಜೆ ಅಬ್ದುಲ್ ಕಲಾಂ ಜೀವನದ ಕುರಿತ 3,21,328 ಪುಸ್ತಕಗಳಿಗೆ ಸರಕಾರ ಬೇಡಿಕೆಯಿಟ್ಟಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ. ಈ ಎಲ್ಲಾ ಪುಸ್ತಕಗಳನ್ನು ಖಾಸಗಿ ಮುದ್ರಕರಿಂದ ಖರೀದಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ, ರಾಜ್ಯ ಸರಕಾರವು ಸ್ವಪ್ರಶಂಸೆಯಲ್ಲಿ ತೊಡಗಿದೆ ಆಮೂಲಕ ಸರಕಾರದ ಲೋಪಗಳನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಚವಾಣ್, ಬಿಜೆಪಿಯು ಭೌತಿಕ ಹತಾಶೆ ಮತ್ತು ಧ್ವೇಷದಿಂದ ಈ ರೀತಿ ವರ್ತಿಸುತ್ತಿದೆ. ಅವರ ಪಕ್ಷವೇ ಕರಾಳ ಇತಿಹಾಸವನ್ನು ಹೊಂದಿದೆ. ಬಿಜೆಪಿ ನಾಯಕರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News