ರಮಣ್ ಸಿಂಗ್, ಪುತ್ರ ನಿರ್ದೋಷಿ: ಸುಪ್ರೀಂ
ಹೊಸದಿಲ್ಲಿ, ಫೆ.13: ಹತ್ತು ವರ್ಷಗಳ ಹಿಂದೆ ನಡೆದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಪಟ್ಟಂತೆ ಚತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತವರ ಪುತ್ರ ಅಭಿಷೇಕ್ ಸಿಂಗ್ ನಿರ್ದೋಷಿ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಧೀಶ ಆದರ್ಶ್ ಕೆ. ಗೋಯಲ್ ಮತ್ತು ಉದಯ್ ಯು. ಲಲಿತ್ ಅವರ ಪೀಠವು ತಳ್ಳಿಹಾಕಿದೆ.
2006 ಮತ್ತು 2008ರ ಮಧ್ಯೆ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿಗಾಗಿ ರಮಣ್ ಸಿಂಗ್ ಸರಕಾರವು ಹೆಚ್ಚುವರಿ ಹಣವನ್ನು ಪಾವತಿಸಿದ್ದು ಆನಂತರ ಈ ಮೊತ್ತವನ್ನು ಬ್ರಿಟಿಷ್ ವರ್ಜಿನ್ ದ್ವೀಪ (ಬ್ರಿಟನ್)ದಲ್ಲಿರುವ ಅಭಿಷೇಕ್ ಸಿಂಗ್‌ಗೆ ಸೇರಿದ ಸಂಸ್ಥೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಸ್ವರಾಜ್ ಅಭಿಯಾನ್ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಆರೋಪಿಸಿತ್ತು.
ಹೆಲಿಕಾಪ್ಟರ್ ಖರೀದಿಗೆ ಸಂಬಂಧಪಟ್ಟಂತೆ ನ್ಯಾಯಾಲಯವು ಮೂಲ ದಾಖಲೆಗಳನ್ನು ನೀಡುವಂತೆ ಸೂಚಿಸಿತ್ತು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಈ ವ್ಯವಹಾರದಲ್ಲಿ ತಪ್ಪು ನಡೆದಿರುವ ಬಗ್ಗೆ ಯಾವುದೇ ಸಾಕ್ಷ ಲಭ್ಯವಾಗಿಲ್ಲ ಎಂದು ತಿಳಿಸಿತು. ರಾಜ್ಯ ಸರಕಾರಕ್ಕೆ ಹೆಲಿಕಾಪ್ಟರ್ ಖರೀದಿಸುವ ಅಧಿಕಾರವಿದೆ. ಹಾಗಾಗಿ ಹೆಲಿಕಾಪ್ಟರ್‌ಗಳನ್ನು ಕಡಿಮೆ ಮೊತ್ತಕ್ಕೆ ಖರೀದಿಸಬಹುದಿತ್ತು ಎಂದು ವಾದಿಸಲು ಯಾವುದೇ ದಾಖಲೆಗಳು ಇಲ್ಲದ ಸಂದರ್ಭದಲ್ಲಿ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತ್ತು.
ಈ ಪ್ರಕರಣದಲ್ಲಿ ಇದಕ್ಕಿಂತ ಉತ್ತಮ ಬೆಲೆಗೆ ಹೆಲಿಕಾಪ್ಟರ್ ನೀಡುವುದಾಗಿ ಯಾವ ಸಂಸ್ಥೆ ಕೂಡಾ ತಿಳಿಸಿಲ್ಲ. ಹಾಗಾಗಿ ಈ ವ್ಯವಹಾರದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.