ಭಾಗವತ್ ದೇಶದ ಕ್ಷಮೆಯಾಚಿಸಲಿ ಎಂದ ಮಾಯಾವತಿ
ಹೊಸದಿಲ್ಲಿ, ಫೆ. 13: ಸೇನೆ ಹಾಗೂ ಆರೆಸ್ಸೆಸ್ ನಡುವೆ ಹೋಲಿಕೆ ಮಾಡಿರುವುದು ‘ವ್ಯಾಕುಲ ಹಾಗೂ ಅವಮಾನ’ ಉಂಟು ಮಾಡಿದೆ. ಆದುದರಿಂದ ಹೇಳಿಕೆ ನೀಡಿದ ಆರ್‌ಎಸ್‌ಎಸ್ ವರಿಷ್ಠ ಮೋಹನ್ ಭಾಗವತ್ ದೇಶದ ಕ್ಷಮೆ ಯಾಚಿಸಬೇಕು ಎಂದು ಬಿಎಸ್‌ಪಿಯ ಮಾಯಾವತಿ ಆಗ್ರಹಿಸಿದ್ದಾರೆ. ಅಗತ್ಯ ಬಿದ್ದರೆ ಮೂರು ದಿನಗಳ ತರಬೇತಿಯಲ್ಲಿ ಆರೆಸ್ಸೆಸ್ ದೇಶಕ್ಕಾಗಿ ಹೋರಾಡಲು ಸಾಮರ್ಥ್ಯ ಹೊಂದಬಹುದು. ಸೇನೆಗೆ ಒಂದು ತಂಡವನ್ನು ಸಿದ್ದಗೊಳಿಸಲು 6-7 ತಿಂಗಳು ಬೇಕಾಗಬಹುದು ಎಂದು ಮೋಹನ್ ಭಾಗವತ್ ಹೇಳಿಕೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಲಕ್ನೋದಲ್ಲಿ ಬುಧವಾರ ನೀಡಿದ ಹೇಳಿಕೆಯಲ್ಲಿ ಮಾಯಾವತಿ ಅವರು, ಮೋಹನ್ ಭಾಗವತ್ ಆರೆಸ್ಸೆಸ್ ಹಾಗೂ ಸೇನೆಯ ನಡುವೆ ಹೋಲಿಕೆ ಮಾಡಿರುವುದು ‘ವ್ಯಾಕುಲ ಹಾಗೂ ಅಗೌರವ’ ಉಂಟು ಮಾಡಿದೆ ಎಂದಿದ್ದಾರೆ. ಭಾಗವತ್ ಅವರಿಗೆ ಸ್ವಯಂಸೇವಕರ ಬಗ್ಗೆ ನಂಬಿಕೆ ಇದ್ದರೆ, ಸರಕಾರದ ವೆಚ್ಚದಲ್ಲಿ ವಿಶೇಷ ಕಮಾಂಡೊಗಳು ಭದ್ರತೆ ಪಡೆದುಕೊಳ್ಳುವ ಅಗತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ. ತಪ್ಪು ಹೇಳಿಕೆಗೆ ಮೋಹನ್ ಭಾಗವತ್ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಮಾಯಾವತಿ ಆಗ್ರಹಿಸಿದ್ದಾರೆ.