ಶ್ರೀನಗರ: ಇಬ್ಬರು ಲಷ್ಕರ್ ಉಗ್ರರ ಹತ್ಯೆ; ಓರ್ವ ಯೋಧ ಹುತಾತ್ಮ
ಶ್ರೀನಗರ,ಫೆ.13: ಇಲ್ಲಿಯ ಜನನಿಬಿಡ ಕರಣ್‌ನಗರ ಪ್ರದೇಶದ ಸಿಆರ್‌ಪಿಎಫ್ ಶಿಬಿರದ ಬಳಿಯ ಕಟ್ಟಡವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಇಬ್ಬರು ಉಗ್ರರು ಮಂಗಳವಾರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಮವಾರ ಬೆಳಿಗ್ಗೆಯಿಂದ ಆರಂಭಗೊಂಡಿದ್ದ 28 ಗಂಟೆಗಳ ಗುಂಡಿನ ಚಕಮಕಿಗೆ ತೆರೆ ಬಿದ್ದಿದೆ. ಎಲ್ಲ ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿವೆ ಎಂದು ಐಜಿಪಿ ಎಸ್.ಪಿ.ಪಾಣಿ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಂಗಳವಾರ ಬೆಳಿಗ್ಗೆ ಅಂತಿಮ ದಾಳಿಗೆ ಭದ್ರತಾ ಪಡೆಗಳು ಸಜ್ಜಾಗುತ್ತಿದ್ದಂತೆ ಬಚ್ಚಿಟ್ಟುಕೊಂಡಿದ್ದ ಉಗ್ರರು ಗುಂಡು ಹಾರಿಸುವುದರೊಡನೆ ಕಾಳಗ ಪುನರಾರಂಭ ಗೊಂಡಿತ್ತು.
ಸೋಮವಾರ ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಸೇನಾ ಸಮವಸ್ತ್ರದಲ್ಲಿದ್ದ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಶಿಬಿರದತ್ತ ಬರುತ್ತಿರುವುದನ್ನು ಗಮನಿಸಿದ್ದ ಸಿಆರ್‌ಪಿಎಫ್ ಯೋಧ ರಘುನಾಥ ಘೈಟ್ ಅವರು ನಿಲ್ಲುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಅದನ್ನು ಕಡೆಗಣಿಸಿ ಮುಂದುವರಿದಾಗ ಘೈಟ್ ಅವರತ್ತ ಗುಂಡು ಹಾರಿಸಿದ್ದರು. ತಕ್ಷಣ ಸಮೀಪದ ಲ್ಲಿಯ ನಿರ್ಮಾಣ ಹಂತದದಲ್ಲಿರುವ ಕಟ್ಟಡಕ್ಕೆ ನುಗ್ಗಿದ ಉಗ್ರರು ಗುಂಡುಗಳನ್ನು ಹಾರಿಸತೊಡಗಿದ್ದರು. ಸಿಆರ್‌ಪಿಎಫ್ ಯೋಧರು ಮತ್ತು ಪೊಲೀಸರು ಕಟ್ಟಡವನ್ನು ಸುತ್ತುವರಿದಿದ್ದು, ದಿನವಿಡೀ ಈ ಪ್ರದೇಶದಲ್ಲಿಯ ಅಂಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಗುಂಡಿನ ಕಾಳಗದಲ್ಲಿ ಸಿಆರ್‌ಪಿಎಫ್ ಯೋಧ ಮುಜಾಹಿದ್ ಖಾನ್ ಹುತಾತ್ಮ ರಾಗಿದ್ದು, ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಗಾಯಗೊಂಡಿದ್ದಾರೆ. ಹತ ಉಗ್ರರನ್ನು ಇನ್ನಷ್ಟೇ ಗುರುತಿಸಬೇಕಿದ್ದು, ಅವರು ಪಾಕಿಸ್ತಾನದ ಲಷ್ಕರೆ ತೈಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಪಾಣಿ ತಿಳಿಸಿದರು. ಲಷ್ಕರ್ ಸೋಮವಾರ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.