ನೆತನ್ಯಾಹು ವಿರುದ್ಧ ಮೊಕದ್ದಮೆ ದಾಖಲಿಸಲು ಸಾಕಷ್ಟು ಪುರಾವೆ: ಇಸ್ರೇಲ್ ಪೊಲೀಸ್

Update: 2018-02-14 16:27 GMT

ಜೆರುಸಲೇಂ, ಫೆ. 14: ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ತಮ್ಮ ಬಳಿ ಸಾಕಷ್ಟು ಪುರಾವೆಯಿದೆ ಎಂದು ಇಸ್ರೇಲ್ ಪೊಲೀಸರು ಮಂಗಳವಾರ ಹೇಳಿದ್ದಾರೆ.

‘ಲಂಚಗಳನ್ನು ಪಡೆದಿರುವುದಕ್ಕೆ, ವಂಚನೆ ನಡೆಸಿರುವುದಕ್ಕೆ ಮತ್ತು ವಿಶ್ವಾಸದ್ರೋಹ ಗೈದಿರುವುದಕ್ಕೆ’ ಪೊಲೀಸರ ಬಳಿ ಪುರಾವೆಗಳಿವೆ ಎಂದು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಪೊಲೀಸರು ತಿಳಿಸಿದ್ದಾರೆ.

ನೆತನ್ಯಾಹು ವಿರುದ್ಧದ ಮೊದಲ ಭ್ರಷ್ಟಾಚಾರ ಪ್ರಕರಣದ ಪ್ರಕಾರ, ಅವರು ವಿದೇಶಿ ಉದ್ಯಮಿಗಳಿಂದ 2007 ಮತ್ತು 2016ರ ನಡುವಿನ ಅವಧಿಯಲ್ಲಿ ಸುಮಾರು 1 ಮಿಲಿಯ ಶೆಕಲ್ (ಸುಮಾರು 1.79 ಕೋಟಿ ರೂಪಾಯಿ) ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರೆ. ಅದರಲ್ಲಿ ಸಿಗಾರ್‌ಗಳು, ಶಾಂಪೇನ್ ಮತ್ತು ಆಭರಣಗಳು ಸೇರಿವೆ.

ಈ ಪ್ರಕರಣವು ಪ್ರಮುಖವಾಗಿ ಇಸ್ರೇಲ್ ಬಿಲಿಯಾಧೀಶ ಹಾಗೂ ಹಾಲಿವುಡ್ ನಿರ್ಮಾಪಕ ಆರ್ನನ್ ಮಿಲ್ಚನ್‌ರೊಂದಿಗೆ ನೆತನ್ಯಾಹು ಹೊಂದಿರುವ ಸಂಬಂಧದ ಮೇಲೆ ಗಮನ ಹರಿಸುತ್ತದೆ.

ಈ ಉಡುಗೊರೆಗಳಿಗೆ ಪ್ರತಿಯಾಗಿ ತೆರಿಗೆ ವಿನಾಯಿತಿ ನೀಡಲು ನೆತನ್ಯಾಹು ಯತ್ನಿಸಿದ್ದರು. ಇದರಿಂದ ಮಿಲ್ಚನ್ ಪ್ರಯೋಜನ ಪಡೆಯುತ್ತಿದ್ದರು ಎನ್ನಲಾಗಿದೆ. ಆದಾಗ್ಯೂ, ಹಣಕಾಸು ಸಚಿವಾಲಯವು ತೆರಿಗೆ ವಿನಾಯಿತಿ ಪ್ರಸ್ತಾಪಗಳಿಗೆ ತಡೆಯೊಡ್ಡಿತ್ತು.

ಎರಡನೆ ಭ್ರಷ್ಟಾಚಾರ ಪ್ರಕರಣದ ಪ್ರಕಾರ, ತನ್ನನ್ನು ನಿಯಮಿತವಾಗಿ ಟೀಕಿಸುತ್ತಿದ್ದ ಪ್ರಮುಖ ಪತ್ರಿಕೆಯೊಂದರ ಮಾಲೀಕ ಆರ್ನನ್ ನೋನಿ ಮೋಸಸ್ ಜೊತೆ ನೆತನ್ಯಾಹು ‘ಕೊಡುಕೊಳ್ಳುವ ವ್ಯವಹಾರ’ದ ಬಗ್ಗೆ ಚರ್ಚಿಸಿದ್ದರು.

ತನ್ನ ಕುರಿತ ಸಕಾರಾತ್ಮಕ ವರದಿಗಾರಿಕೆಗೆ ಪ್ರತಿಯಾಗಿ ಎದುರಾಳಿ ಪತ್ರಿಕೆಯೊಂದರ ಪ್ರಸರಣಕ್ಕೆ ಅಡ್ಡಿಪಡಿಸುವ ಭರವಸೆಯನು ಅವರು ನೀಡಿದ್ದರು ಎಂದು ಆರೋಪಿಸಲಾಗಿದೆ.

ರಾಜೀನಾಮೆ ನೀಡುವುದಿಲ್ಲ

ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ತಳ್ಳಿಹಾಕಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅವುಗಳು ಪೂರ್ವಾಗ್ರಹಪೀಡಿತವಾಗಿವೆ ಎಂದು ಆರೋಪಿಸಿದ್ದಾರೆ.

‘‘ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ’’ ಎಂದು ಅವರು ಹೇಳಿದರು.

ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News