‘ಅ್ರಕಮ’ ವಲಸಿಗ ಶಿಕ್ಷಕ ಬಾಂಗ್ಲಾಕ್ಕೆ ಪ್ರಯಾಣಿಸುತ್ತಿದ್ದಾಗ ಗಡಿಪಾರಿಗೆ ತಡೆ

Update: 2018-02-14 15:41 GMT

ಶಿಕಾಗೊ (ಅಮೆರಿಕ), ಫೆ. 14: ಅಮೆರಿಕದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಬಾಂಗ್ಲಾದೇಶದ ‘ಅಕ್ರಮ’ ವಲಸಿಗ ಪ್ರಜೆಯೊಬ್ಬರ ಗಡಿಪಾರು ಪ್ರಕ್ರಿಯೆ ಪ್ರತಿ ದಿನ ಹೊಸ ತಿರುವುಗಳನ್ನು ಪಡೆಯುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೂತನ ವಲಸೆ ನೀತಿಗಳು ಜನರನ್ನು ಅವರ ಕುಟುಂಬದಿಂದ ಹೇಗೆ ಬೇರ್ಪಡಿಸುತ್ತಿವೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

ಅಮೆರಿಕದ ಕ್ಯಾನ್ಸಸ್ ರಾಜ್ಯದ ಲಾರೆನ್ಸ್‌ನಲ್ಲಿ ನೆಲೆಸಿರುವ ರಸಾಯನಶಾಸ್ತ್ರ ಶಿಕ್ಷಕ ಸೈಯದ್ ಅಹ್ಮದ್ ಜಮಾಲ್‌ರನ್ನು ಮಂಗಳವಾರ ಗಡಿಪಾರು ಮಾಡಲಾಗಿತ್ತು. ಅವರನ್ನು ಬಾಂಗ್ಲಾದೇಶಕ್ಕೆ ಒಯ್ಯುತ್ತಿದ್ದ ವಿಮಾನ ಆಕಾಶದಲ್ಲಿ ಹಾರುತ್ತಿರುವಾಗ ಗಡಿಪಾರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಹಾಗಾಗಿ, ವಿಮಾನ ಹವಾಯಿ ವಿಮಾನ ನಿಲ್ದಾಣದಲ್ಲಿ ನಿಂತಾಗ ಅವರನ್ನು ವಿಮಾನದಿಂದ ಇಳಿಸಲಾಯಿತು.

‘‘ಇಂದು ಹೆಚ್ಚಿನ ಬೆಳವಣಿಗೆಗಳು ಸಂಭವಿಸಿಲ್ಲ. ಸೈಯದ್ ಈಗಲೂ ಹೊನೊಲುಲು ಫೆಡರಲ್ ಜೈಲಿನಲ್ಲಿದ್ದಾರೆ’’ ಎಂದು ಅವರ ವಕೀಲೆ ರೇಖಾ ಶರ್ಮಾ-ಕ್ರಾಫರ್ಡ್ ಮಂಗಳವಾರ ತಿಳಿಸಿದರು.

ಸೈಯದ್ ಅಹ್ಮದ್ ಜಮಾಲ್‌ರ ಮೂವರು ಮಕ್ಕಳು ಅಮೆರಿಕ ಪ್ರಜೆಗಳಾಗಿದ್ದಾರೆ ಹಾಗೂ ಅವರು ಅವರ ಸಮುದಾಯದ ನೆಚ್ಚಿನ ಸದಸ್ಯರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ಸ್ನೇಹಿತರು, ನೆರೆಕರೆಯವರು ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಲಸೆ ನೀತಿಗಳ ಟೀಕಾಕಾರದಿಂದ ಭಾರೀ ಪ್ರಮಾಣದಲ್ಲಿ ಬೆಂಬಲ ಹರಿದು ಬರುತ್ತಿದೆ.

55 ವರ್ಷದ ಜಮಾಲ್ ಅಮೆರಿಕದಲ್ಲಿ 30 ವರ್ಷಗಳಿಂದ ನೆಲೆಸಿದ್ದಾರೆ. 2011ರಲ್ಲಿ ಅವರು ಪಡೆದುಕೊಂಡಿದ್ದ ವೀಸಾ ಅವಧಿ ಈಗ ಮುಕ್ತಾಯಗೊಂಡಿದೆ.

ಅಮೆರಿಕದ ಪೌರತ್ವ ಪಡೆದುಕೊಳ್ಳಲು ಕ್ಷಿಪ್ರ ವಿಧಾನಗಳಿಲ್ಲ. ಹಾಗಾಗಿ, ಸಾಮಾನ್ಯವಾಗಿ ಅನುಸರಿಸಲಾಗುವ ಆಡಳಿತಾತ್ಮಕ ನಿಧಾನಗತಿಯ ಮೂಲಕ ಅವರಿಗೆ ಅಮೆರಿಕದಲ್ಲಿ ಉಳಿದು ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ವಲಸೆ ಅಧಿಕಾರಿಗಳು ಅವರನ್ನು ಯಾವಾಗ ಬೇಕಾದರೂ ಗಡಿಪಾರು ಮಾಡಬಹುದಾಗಿದೆ.

ಹಠಾತ್ ಬಂಧನ

ಮೂರು ವಾರಗಳ ಹಿಂದೆ ಜಮಾಲ್ ತನ್ನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅವರನ್ನು ಒಮ್ಮೆಲೆ ಬಂಧಿಸಲಾಗಿತ್ತು.

ವಲಸೆ ನ್ಯಾಯಾಧೀಶರೊಬ್ಬರು ಕಳೆದ ವಾರ ಅವರ ಗಡಿಪಾರಿಗೆ ತಡೆ ನೀಡಿದ್ದರು. ಆದರೆ, ಸೋಮವಾರ ಅದನ್ನು ತೆರವುಗೊಳಿಸಿದರು. ಹಾಗಾಗಿ, ವಲಸೆ ಅಧಿಕಾರಿಗಳು ಅವರನ್ನು ಬಾಂಗ್ಲಾದೇಶಕ್ಕೆ ಹೋಗುವ ವಿಮಾನದಲ್ಲಿ ಕುಳ್ಳಿರಿಸಿದರು.ಬಳಿಕ ವಲಸೆ ಮೇಲ್ಮನವಿ ನ್ಯಾಯಾಲಯವೊಂದು ಇನ್ನೊಂದು ತಡೆಯಾಜ್ಞೆ ವಿಧಿಸಿತು. ಆಗ ಅವರು ಆಕಾಶದಲ್ಲಿ ಹಾರುತ್ತಿದ್ದರು. ವಿಮಾನ ಹವಾಯಿಯಲ್ಲಿ ಇಳಿದಾಗ ಅವರನ್ನು ಕೆಳಗಿಳಿಸಿ ಅಮೆರಿಕದ ನೆಲದಲ್ಲೇ ಇರಿಸಲಾಯಿತು.

ಮುಂದೆ ಯಾವ ಬೆಳವಣಿಗೆ ಸಂಭವಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News