ಹಾರ್ಲೆ-ಡೇವಿಡ್ಸನ್ ಬೈಕ್‌ಗೆ ಭಾರತದಲ್ಲಿ 75 ಶೇ. ಆಮದು ಸುಂಕ: ಟ್ರಂಪ್ ಕಿಡಿ

Update: 2018-02-14 16:56 GMT

ವಾಶಿಂಗ್ಟನ್, ಫೆ. 14: ಹಾರ್ಲೆ-ಡೇವಿಡ್ಸನ್ ಮೋಟರ್‌ಸೈಕಲ್‌ಗಳ ಮೇಲೆ ಅಧಿಕ ಆಮದು ಸುಂಕವನ್ನು ವಿಧಿಸಿರುವುದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಭಾರತವನ್ನು ಟೀಕಿಸಿದ್ದಾರೆ ಹಾಗೂ ಭಾರತದಿಂದ ಅಮೆರಿಕಕ್ಕೆ ಬರುವ ‘ಸಾವಿರ ಸಾವಿರ’ ಮೋಟರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಏರಿಸುವುದಾಗಿ ಬೆದರಿಸಿದ್ದಾರೆ.

ಉಕ್ಕು ಉದ್ಯಮದ ಬಗ್ಗೆ ಕಾಂಗ್ರೆಸ್ ಸದಸ್ಯರೊಂದಿಗೆ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಆಮದು ಸುಂಕವನ್ನು 75 ಶೇಕಡದಿಂದ 50 ಶೇಕಡಕ್ಕೆ ಇಳಿಸಲು ಭಾರತ ಸರಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರ ಸಾಕಾಗುವುದಿಲ್ಲ ಎಂದರು. ಮೋಟರ್‌ಸೈಕಲ್‌ಗಳ ಆಮದಿನ ಮೇಲೆ ಅಮೆರಿಕ ‘ಶೂನ್ಯ ತೆರಿಗೆ’ ವಿಧಿಸುತ್ತಿದ್ದು, ಭಾರತದ ತೆರಿಗೆ ಮಟ್ಟವೂ ಇದಕ್ಕೆ ಸರಿಸಮಾನವಾಗಬೇಕು ಎಂದು ಟ್ರಂಪ್ ಅಭಿಪ್ರಾಯಪಟ್ಟರು.

‘‘ಹಾರ್ಲೆ-ಡೇವಿಡ್ಸನ್ ಮೋಟರ್‌ಸೈಕಲ್‌ಗಳನ್ನು ನೀವು ಭಾರತದಲ್ಲಿ ಮಾರಾಟ ಮಾಡಬೇಕಾದರೆ 50ರಿಂದ 75 ಶೇಕಡ ತೆರಿಗೆ ನೀಡಬೇಕು. ಆದರೆ, ಅವರು ಭಾರತದಿಂದ ಸಾವಿರಾರು ಮೋಟರ್‌ಸೈಕಲ್‌ಗಳನ್ನು ಅಮೆರಿಕಕ್ಕೆ ಮಾರಾಟ ಮಾಡುತ್ತಾರೆ. ಇದು ಹೆಚ್ಚಿನವರಿಗೆ ಗೊತ್ತಿಲ್ಲ. ಅದಕ್ಕೆ ತೆರಿಗೆ ಎಷ್ಟು ಗೊತ್ತೇ? ತೆರಿಗೆಯೇ ಇಲ್ಲ’’ ಎಂದು ಸಂಸದರು ಮತ್ತು ತನ್ನ ಸಂಪುಟ ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾನಾಡುತ್ತಾ ಟ್ರಂಪ್ ಹೇಳಿದರು.

‘ಅಮೆರಿಕದೊಂದಿಗಿನ ವ್ಯಾಪಾರ ಬಾಂಧವ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ’ ದೆಶಗಳ ಮೇಲೆ ‘ಸಮಾನ ತೆರಿಗೆ’ ವಿಧಿಸುವುದಾಗಿ ಟ್ರಂಪ್ ಮತ್ತೊಮ್ಮೆ ಘೋಷಿಸಿದ್ದಾರೆ.

ಭಾರತದ ‘ಗ್ರೇಟ್ ಜಂಟಲ್‌ಮನ್’ ಫೋನ್ ಮಾಡಿದ್ರು...!

ಈ ಸಂಬಂಧ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ತಾನು ನಡೆಸಿದ ಮಾತುಕತೆಯನ್ನೂ ಟ್ರಂಪ್ ಪರೋಕ್ಷವಾಗಿ ಪ್ರಸ್ತಾಪಿಸಿದರು.

‘‘ಭಾರತದಿಂದ ‘ಗ್ರೇಟ್ ಜಂಟಲ್‌ಮನ್’ ಒಬ್ಬರು ನನಗೆ ಕರೆ ಮಾಡಿ ಹೇಳಿದರು: ಮೋಟರ್‌ಸೈಕಲ್‌ಗಳ ಮೇಲಿನ ಸುಂಕವನ್ನು ನಾವು ಈಗಷ್ಟೇ ಕಡಿತಗೊಳಿಸಿದ್ದೇವೆ. 75 ಶೇಕಡ ಹಾಗೂ 100 ಶೇಕಡದಷ್ಟಿದ್ದ ಸುಂಕವನ್ನು ನಾವು 50 ಶೇಕಡಕ್ಕೆ ಇಳಿಸಿದ್ದೇವೆ’’ ಎಂದು ಟ್ರಂಪ್ ಹೇಳಿದರು.

 ಪ್ರಧಾನಿ ಮೋದಿಯೊಂದಿಗೆ ಕಳೆದ ವಾರ ನಡೆದ ಫೋನ್ ಸಂಭಾಷಣೆಯನ್ನು ಅವರು ಇಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಅವರು ಹೇಗೆ ಪಾರಾದರು?

  ‘‘ಇಂಥ ಪ್ರಕರಣಗಳಲ್ಲಿ ಸಮಾನ ತೆರಿಗೆಗಳು ಬೇಕು ಎಂದು ನಾನು ಹೇಳುತ್ತೇನೆ. ನಾನು ಭಾರತವನ್ನು ದೂರುತ್ತಿಲ್ಲ. ಇದರಿಂದ ಪಾರಾಗಲು ಅವರಿಗೆ ಸಾಧ್ಯವಾಗಿರುವುದು ದೊಡ್ಡ ಸಂಗತಿಯೇ ಹೌದು. ಪಾರಾಗಲು ಅವರಿಗೆ ಜನರು ಯಾಕೆ ಅವಕಾಶ ಮಾಡಿಕೊಟ್ಟರು ಎಂದು ನನಗೆ ಗೊತ್ತಿಲ್ಲ. ಆದರೆ ಇಂಥ ಒಂದು ಪ್ರಕರಣ ನಡೆದಿರುವುದು ದುರದೃಷ್ಟಕರ. ಈಗ ನನಗನಿಸುತ್ತದೆ ಸಮಾನ ತೆರಿಗೆಯನ್ನು ನಾವು ಹೊಂದಬೇಕು ಎಂದು’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News