'ಭಯೋತ್ಪಾದಕ ಒಸಾಮ ಬಿನ್ ಲಾದೆನ್ ಉತ್ಸವ ನಡೆಸಲಿ'

Update: 2018-02-15 12:13 GMT

ಪುತ್ತೂರು, ಫೆ. 15: ಕರ್ನಾಟಕದ ಹಿರಿಮೆಯಾಗಿದ್ದ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ದಂಗೆಕೋರ ಬಹುಮನಿ ಸುಲ್ತಾನರು ಶ್ರೀಮಂತ ವಿಜಯನಗರ ಸಾಮ್ರಾಜ್ಯವನ್ನು ಹಾಳುಹಂಪೆ ಮಾಡಿದ ಕರ್ನಾಟಕದ ಕರಾಳ ಘಟನೆಯ ಕುರಿತು ಅರಿವಿದ್ದರೂ, ಬಹುಮನಿ ಉತ್ಸವ ಆಚರಿಸಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಮಾ ಬಿನ್ ಲಾದೆನ್ ಉತ್ಸವವನ್ನು ಆಚರಿಸಲಿ. ಈ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಯಾವ ರೀತಿಯಲ್ಲಿ ಬೇಕಾದರೂ ನಡೆದುಕೊಳ್ಳುವ ರಾಜಕಾರಣವನ್ನು ನಡೆಸಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಪುತ್ತೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಕರ್ನಾಟಕದ ಸಾಂಸ್ಕೃತಿಕ, ಆರ್ಥಿಕ ವೈಭವದ ಸಂಕೇತವಾಗಿದ್ದ ವಿಜಯನಗರ ಸಾಮ್ರಾಜ್ಯವನ್ನು ಸರ್ವನಾಶ ಮಾಡಿದ ಬಹುಮನಿ ಸುಲ್ತಾನರ ಹೆಸರಿನಲ್ಲಿ ಉತ್ಸವ ಮಾಡಲು ಹೊರಟಿರುವುದು ಅತ್ಯಂತ ದುರಾದೃಷ್ಟಕರ ಎಂದರು.

ಕರ್ನಾಟಕದ ವಿಜಯನಗರ ಸಾಮ್ರಾಜ್ಯ ಮುತ್ತುರತ್ನಗಳನ್ನು ಬೀದಿ ಬದಿ ರಾಶಿ ಹಾಕಿ ಮಾರಾಟ ಮಾಡುವಷ್ಟು ಅಂದಿನ ಶ್ರೀಮಂತ ವಿಜಯನಗರವನ್ನು ಲೂಟಿ ಮಾಡಿದ, ವಿರೂಪಾಕ್ಷ ದೇಗುಲವನ್ನು ಧ್ವಂಸ ಮಾಡಿದ ದಂಗೆಕೋರ ಬಹುಮನಿ ಸುಲ್ತಾನರ ಕುರಿತು ಇತಿಹಾಸ ಪುಸ್ತಕಗಳು ಏನು ಹೇಳುತ್ತವೆ ಎಂಬುದನ್ನು ಸಿದ್ದರಾಮಯ್ಯ ಒಮ್ಮೆ ಓದಲಿ. ಈ ಇತಿಹಾಸವನ್ನು ದಾಖಲಿಸಿದ ವಿದೇಶಿ ಇತಿಹಾಸಕಾರರು ಮುಸ್ಲಿಂ ದಂಗೆಕೋರರಾದ ಬಹುಮನಿ ಸುಲ್ತಾನರು ದಕ್ಷಿಣದಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರತಿಷ್ಠಾಪಿಸಲು ಅತ್ಯಂತ ಶ್ರೀಮಂತ ಅರಸೊತ್ತಿಗೆಯಾದ ವಿಜಯನಗರ ಸಾಮ್ರಾಜ್ಯಕ್ಕೆ ದಾಳಿ ನಡೆಸಿ,  ಮುತ್ತು, ರತ್ನ, ವೈಡೂರ್ಯ, ಚಿನ್ನಾಭರಣಗಳನ್ನು ಲೂಟಿ ಮಾಡಿದರು. ದೇವಾಲಯಗಳನ್ನು ಹಾಳುಗೈದರು ಎಂದು ಉಲ್ಲೇಖಿಸಿದ್ದಾರೆ. ಅಂತಹ ದಂಗೆಕೋರರನ್ನು ವೈಭವೀಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.

ಹಿಂದೂ ಕಾರ್ಯಕರ್ತರ ಹತ್ಯಾ ಸರಣಿ ನಡೆದಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮಾಡಿದ ಪಾಪ ಕೃತ್ಯಗಳನ್ನು ಯಾರೂ ಕ್ಷಮಿಸಲಾರರು. ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಇಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಮೃದು ಹಿಂದುತ್ವದ ನಾಟಕ ಆಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಪರಿವರ್ತನೆಯಾಗಿ ಈಗ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆಯೇ ಅಥವಾ ಕ್ರೈಸ್ತ ಧರ್ಮದಲ್ಲಿಯೇ ಮುಂದುವರಿಯುತ್ತಿದ್ದಾರೆಯೇ ಎಂಬುದನ್ನು ರಾಹುಲ್ ಗಾಂಧಿ ಜನರಿಗೆ ತಿಳಿಸಬೇಕಾಗಿದೆ. ಹಿಂದೂ ವಿರೋಧಿ ಆಡಳಿತದ ಕಾಂಗ್ರೆಸ್ ಸರಕಾರವಿರುವ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ಮರ್ಮವೇನು ಎಂದು ಬಹಿರಂಗಗೊಳ್ಳಬೇಕು ಎಂದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್. ಶಿವರಂಜನ್, ಪುತ್ತೂರು ನಗರಮಂಡಲ ಅಧ್ಯಕ್ಷ ಕೆ. ಜೀವಂಧರ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News