ಪುತ್ತೂರು: ಈ ಬಾರಿ ಕಣದಲ್ಲಿ ಯಾರು

Update: 2018-02-16 06:28 GMT

ಪುತ್ತೂರು, ಫೆ.15: ಪುತ್ತೂರು ವಿಧಾನಸಭಾ ಕ್ಷೇತ್ರವು ಪುತ್ತೂರು ಮತ್ತು ಬಂಟ್ವಾಳ ತಾಲೂಕುಗಳ ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಒಟ್ಟು 217 ಮತದಾನ ಕೇಂದ್ರಗಳಿದ್ದು, ಈ ಪೈಕಿ 66 ಸೂಕ್ಷ್ಮ, 22 ಅತೀ ಸೂಕ್ಷ್ಮ ಮತ್ತು 39 ಸಾಮಾನ್ಯ ಕೇಂದ್ರಗಳಾಗಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 97,720 ಪುರುಷರು, 97,087 ಮಹಿಳೆಯರು ಸೇರಿದಂತೆ ಒಟ್ಟು 1,94,807 ಮತದಾರರಿದ್ದು, 2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ 66,345 ಮತಗಳನ್ನು ಪಡೆದು ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಸಂಜೀವ ಮಠಂದೂರುರನ್ನು 4,289 ಅಂತರದಲ್ಲಿ ಸೋಲಿಸಿದ್ದರು. ಜೆಡಿಎಸ್‌ನ ದಿನೇಶ್ ಗೌಡ 6,625, ಎಸ್‌ಡಿಪಿಐ ಪಕ್ಷದ ಅಬೂಬಕರ್ ಸಿದ್ದೀಕ್ 4,442, ಕರ್ನಾಟಕ ಜನತಾ ಪಕ್ಷದ ಜಯರಾಮ ಭಟ್ 1,506 ಮತ್ತು ಸ್ವತಂತ್ರ ಅಭ್ಯರ್ಥಿ ಶೇಖರ್ ಮಾಡಾವು 1,834 ಮತ ಪಡೆದುಕೊಂಡಿದ್ದರು.

ಮತದಾರಲ್ಲಿ ಪ್ರಮುಖರು: ಇಲ್ಲಿ ಗೌಡ ಸಮುದಾಯದವರು ಗರಿಷ್ಠ ಮತದಾರರಾಗಿದ್ದು, ಮಾಹಿತಿ ಆಧಾರಿತ ಅಂಕಿ ಅಂಶದಂತೆ ಸುಮಾರು 35 ಸಾವಿರದಷ್ಟು ಗೌಡ ಸಮುದಾಯ, 30 ಸಾವಿರಷ್ಟು ಮುಸ್ಲಿಮ್ ಸಮುದಾಯ, 26 ಸಾವಿರ ಬಂಟ ಸಮುದಾಯ, 20 ಸಾವಿರದಷ್ಟು ಬಿಲ್ಲವ ಸಮುದಾಯದ ಮತದಾರರಿದ್ದಾರೆ. ಪುತ್ತೂರು ಕ್ಷೇತ್ರದಿಂದ 5 ಬಾರಿ ಕಾಂಗ್ರೆಸ್, 6 ಬಾರಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಪುತ್ತೂರು ಮತ್ತು ಸುಳ್ಯ ಕ್ಷೇತ್ರ ಒಂದಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಕೂಜಿಗೋಡು ವೆಂಕಟ್ರಮಣ ಗೌಡ ಪ್ರಥಮ ಶಾಸಕರಾಗಿ ಪುತ್ತೂರಿನಿಂದ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್‌ನ ವಿಠಲನಾಥ ಶೆಟ್ಟಿ ಆಯ್ಕೆಯಾಗಿ ರಾಜ್ಯದ ಸಚಿವರೂ ಆಗಿದ್ದರು. ನಂತರ 2 ಅವಧಿಗೆ ಬಿಜೆಪಿಯ ಕೆ.ರಾಮ ಭಟ್ ಆಯ್ಕೆಯಾಗಿದ್ದು, ಬಳಿಕ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ 2 ಬಾರಿ ಆಯ್ಕೆಯಾಗಿ ರಾಜ್ಯ ಸರಕಾರದ ಸಚಿವರೂ ಆಗಿದ್ದರು. ನಂತರ ಈಗಿನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ 2 ಬಾರಿ ಆಯ್ಕೆಯಾಗಿದ್ದರು. ಹಾಲಿ ಶಾಸಕಿಯಾಗಿರುವ ಶಕುಂತಳಾ ಶೆಟ್ಟಿ ಒಂದು ಅವಧಿಯಲ್ಲಿ ಬಿಜೆಪಿಯಿಂದ ಆಯ್ಕೆಗೊಂಡಿದ್ದರೆ, ಮತ್ತೊಂದು ಅವಧಿಯಲ್ಲಿ ಕಾಂಗ್ರೆಸ್‌ಪಕ್ಷದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಲ್ಲಿಕಾ ಪ್ರಸಾದ್ ಒಂದು ಅವಧಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಪುತ್ತೂರಿನ ಇತಿಹಾಸ ಮತ್ತು ವೈಶಿಷ್ಟ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ.ಶಿವರಾಮ ಕಾರಂತರ ಕರ್ಮಭೂಮಿಯಾದ ಬಾಲವನ, ದಕ್ಷಿಣ ಏಷ್ಯಾದಲ್ಲಿಯೇ 2ನೆಯದಾಗಿರುವ ಬಿಸಿನೀರಿನ ಬುಗ್ಗೆ ಬೆಂದ್ರ್ ತೀರ್ಥ, ಈಶ್ವರಮಂಗಲ ದಲ್ಲಿರುವ ಹನುಮಗಿರಿ ಕ್ಷೇತ್ರ, ಕೋಟಿಚೆನ್ನಯರ ಹುಟ್ಟೂರಾದ ಪಡುಮಲೆ ಕ್ಷೇತ್ರ, ಗೆಜ್ಜೆಗಿರಿ ನಂದನ ಬಿತ್ತ್‌ಲ್ ಇತಿಹಾಸ ಪ್ರಸಿದ್ಧವಾದ ಸ್ಥಳವಾಗಿದೆ.

ಕಾರಂತರ ಬಾಲವನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ 1 ಕೋಟಿ ರೂ. ಅನುದಾನವನ್ನು ಒದಗಿಸಿ ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಪಡುಮಲೆ ಕ್ಷೇತ್ರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹಲವಾರು ಕಾಮಗಾರಿ ಮಾಡಲಾಗಿದೆ. ಸಚಿವ ರಮಾನಾಥ ರೈ ಇಲ್ಲಿನ ದೇಯಿ ಬೈದೆತಿ ಔಷಧಿವನ ನಿರ್ಮಿಸುವ ಮೂಲಕ ಕೋಟಿಚೆನ್ನಯರ ಹುಟ್ಟೂರಿಗೆ ತನ್ನ ಕೊಡುಗೆಯನ್ನು ನೀಡಿದ್ದಾರೆ. ಹನುಮಗಿರಿ ಮೈಸೂರಿನ ಒಡೆಯರ್ ಸೇರಿದಂತೆ ಹಲವಾರು ರಾಜಕೀಯ, ಸಾಮಾಜಿ ಮತ್ತು ಧಾರ್ಮಿಕ ಮುಖಂಡರನ್ನು ತನ್ನತ್ತ ಸೆಳೆಯುತ್ತಿದೆ. ಐತಿಹಾಸಿಕ ಬೆಂದ್ರ್ ತೀರ್ಥ ಮಾತ್ರ ತೀರಾ ನಾದುರಸ್ತಿಯಲ್ಲಿದ್ದು ಯಾವುದೇ ಅಭಿವೃದ್ಧಿ ಕಾಣದೆ ಇತಿಹಾಸದ ಪುಟ ಸೇರುವ ಹಂತದಲ್ಲಿದೆ.

ಅಗತ್ಯ ಅಭಿವೃದ್ಧಿ ಕಾರ್ಯಗಳು: ಪುತ್ತೂರಿನಲ್ಲಿ ಸರಿಯಾದ ಕೈಗಾರಿಕಾ ವಲಯ ಇನ್ನೂ ನಿರ್ಮಾಣವಾಗಿಲ್ಲ. ಆರ್ಯಾಪು ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಇಂಡಸ್ಟ್ರಿಯಲ್ ಏರಿಯಾವಿದ್ದರೂ ಅದರಲ್ಲಿ ವಿದ್ಯುತ್ ವ್ಯವಸ್ಥೆ ಸೇರಿದಂತೆ ಸಮರ್ಪಕವಾದ ಮೂಲಭೂತ ವ್ಯವಸ್ಥೆಗಳಿಲ್ಲ. ಬೆಂದ್ರ್ ತೀರ್ಥ ದುರಸ್ತಿಗೊಂಡು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿ ಮಾರ್ಪಾಡು ಆಗಬೇಕಾಗಿದೆ.

ಶಕುಂತಳಾಗೆ ಟಿಕೆಟ್ ಖಚಿತ?

ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತೆ ಪಕ್ಷದ ಟಿಕೇಟು ಪಡೆದು ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪುತ್ತೂರು ಟಿಕೇಟ್ ಆಕಾಂಕ್ಷಿಯಾಗಿದ್ದು, ಗೌಡ ಸಮುದಾಯ ಬಹುಮತವಿರುವುದನ್ನು ಮುಂದಿಟ್ಟು ಸುಳ್ಯದ ದಿವ್ಯಪ್ರಭಾ ಚಿಲ್ತಡ್ಕ ಅವರೂ ಸ್ಪರ್ಧೆಗೆ ಅವಕಾಶವನ್ನು ಬಯಸುತ್ತಿದ್ದಾರೆ. ಬಿಜೆಪಿಯಲ್ಲಿ ಹಿಂದಿನ ಬಾರಿ ಸ್ಪರ್ಧಿಸಿ ಅಲ್ಪಮತಗಳಿಂದ ಸೋಲನುಭವಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇವರು ಪುತ್ತೂರಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಹತ್ತಿರದ ಸಂಬಂಧಿಕರೂ ಹೌದು. ಉಳಿದಂತೆ ಡಿ.ವಿ.ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಸಂಘ ಪರಿವಾರ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. 

ಜೆಡಿಎಸ್ ಮತ್ತು ಎಸ್‌ಡಿಪಿಐ ಕಳೆದ ಬಾರಿ ಸ್ಪರ್ಧೆ ನೀಡಿತ್ತು. ಆದರೆ ಈ ಬಾರಿ ಇವೆರಡು ಪಕ್ಷದಿಂದ ಯಾರದೇ ಹೆಸರು ಕೇಳಿ ಬರುತ್ತಿಲ್ಲ. ಹಾಗೆಂದು ಪಕ್ಷಗಳು ಸ್ಪರ್ಧೆಗಿಳಿಯುವುದನ್ನು ಅಲ್ಲಗಳೆಯುವಂತಿಲ್ಲ.

ರಾಹುಲ್‌ಗಾಂಧಿ ಅವರ ರಾಜ್ಯ ಭೇಟಿಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ಚುನಾವಣೆಯಲ್ಲಿ ಈ ಬಾರಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪ ತೊಟ್ಟಿದ್ದೇವೆ. ಮುಂಬೈ-ಕರ್ನಾಟಕ ಭಾಗದಲ್ಲಿ ಫೆಬ್ರವರಿ ಅಂತ್ಯದಲ್ಲಿ ರಾಹುಲ್‌ಗಾಂಧಿ ಪ್ರವಾಸ ಕೈಗೊಳ್ಳಲಿದ್ದಾರೆ. ಯಾತ್ರೆಯ ರೂಪುರೇಷೆಗಳು ಸಿದ್ಧವಾಗುತ್ತಿವೆ. ಮಾರ್ಚ್ ತಿಂಗಳಿನಿಂದ ರಾಜ್ಯದ ಎಲ್ಲ ನಾಯಕರು ಒಗ್ಗಟ್ಟಾಗಿ ಪ್ರವಾಸ ಕೈಗೊಳ್ಳಲಿದ್ದೇವೆ. ಕೇಂದ್ರ ಸರಕಾರದ ವೈಫಲ್ಯಗಳು ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ.

ದಿನೇಶ್ ಗುಂಡೂರಾವ್,  ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ಶಂಸುದ್ದೀನ್ ಸಂಪ್ಯ

contributor

Editor - ಶಂಸುದ್ದೀನ್ ಸಂಪ್ಯ

contributor

Similar News