ಒಂಟೆ ಹೇಗೆ ಮರುಭೂಮಿಯಲ್ಲಿ ಸುಲಭವಾಗಿ ನಡೆಯುತ್ತದೆ....?

Update: 2018-02-16 09:46 GMT

ಒಂಟೆಯನ್ನು ‘ಮರುಭೂಮಿಯ ಹಡಗು’ ಎಂದೇ ಕರೆಯಲಾಗುತ್ತದೆ. ಅದು ವಿವಿಧ ಕಾರಣಗಳಿಂದಾಗಿ ಅತಿಯಾದ ತಾಪಮಾನದ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದಕ್ಕೆ ಅದರ ಡುಬ್ಬ, ನೀಳ ಕಾಲುಗಳು, ಉದ್ದ ಕೂದಲು ಮತ್ತು ವಿಶೇಷ ಕಣ್ಣುಗುಡ್ಡೆ ಸಹಕಾರಿಯಾಗಿವೆ.

ಒಂಟೆಯ ಡುಬ್ಬವು ಆಹಾರವನ್ನು ಸಂಗ್ರಹಿಸಿಕೊಂಡರೆ, ದೇಹದ ಮೇಲಿರುವ ಉದ್ದನೆಯ ಕೂದಲುಗಳು ಮರುಭೂಮಿಯಲ್ಲಿನ ಚಳಿಯ ರಾತ್ರಿಗಳಲ್ಲಿ ಅದನ್ನು ಬೆಚ್ಚಗಿರಿಸಲು ನೆರವಾಗುತ್ತವೆ.

ಒಂಟೆಯ ನೀಳವಾದ ಕಾಲುಗಳು ಶಕ್ತಿಶಾಲಿಯಾಗಿದ್ದು, ದೂರದೂರದವರೆಗೆ ಭಾರವನ್ನು ಸಾಗಿಸುವುದನ್ನು ಸಾಧ್ಯವಾಗಿಸುವ ಬಲವಾದ ಮಾಂಸಖಂಡಗಳನ್ನು ಹೊಂದಿವೆ. ಮಧ್ಯಮ ವೇಗದಲ್ಲಿ ನಡೆಯುವ ಒಂಟೆಯು ತನ್ನ ಪ್ರತಿಯೊಂದು ಪಾದದಲಿ ಎರಡು ಬೆರಳುಗಳನ್ನು ಹೊಂದಿದೆ. ಪ್ರತಿ ಬೆರಳಿನ ಮುಂದೆ ಉಗುರಿನಂತೆ ಕಾಣುವ ಗೊರಸು ಬೆಳೆದಿರುತ್ತದೆ. ಎರಡು ಬೆರಳುಗಳ ನಡುವೆ ಅವುಗಳನ್ನು ಪರಸ್ಪರ ಸಂಪರ್ಕಿಸುವ ಅಗಲವಾದ ಮೆತ್ತಗಿನ ಪ್ಯಾಡ್‌ನಂತಹ ರಚನೆಯು ಇದ್ದು, ಒಂಟೆಯು ನೆಲದಲ್ಲಿ ನಡೆಯುವಾಗ ಈ ಪ್ಯಾಡ್ ವಿಸ್ತಾರಗೊಳ್ಳುತ್ತದೆ.

ವ್ಯಕ್ತಿಯೋರ್ವ ಹಿಮದಲ್ಲಿ ನಡೆಯುವಾಗ ಹಿಮಬೂಟುಗಳು ಆತನಿಗೆ ಆಧಾರ ನೀಡುವಂತೆ ಈ ಪ್ಯಾಡ್ ಒಂಟೆಯು ಸಡಿಲವಾದ ಮರಳಿನಲ್ಲಿ ನಡೆಯುವಾಗ ಅದಕ್ಕೆ ಆಧಾರವನ್ನು ನೀಡುತ್ತದೆ ಮತ್ತು ಭೂಮಿಯ ಮೇಲೆ ಬಿಗಿಯಾದ ಹಿಡಿತವನ್ನು ಹೊಂದಿರಲು ಅದಕ್ಕೆ ನೆರವಾಗುತ್ತದೆ. ಗೊರಸುಗಳು ಉಬ್ಬುತಗ್ಗುಗಳಿಂದ ಪಾದಗಳಿಗೆ ರಕ್ಷಣೆಯನ್ನು ನೀಡುತ್ತವೆ. ಒಂಟೆಯು ನಡೆಯುವಾಗ ಒಂದು ಬದಿಯ ಎರಡೂ ಕಾಲುಗಳನ್ನು ಏಕಕಾಲಕ್ಕೆ ಮೇಲಕ್ಕೆತ್ತುತ್ತದೆ ಮತ್ತು ಕೆಳಕ್ಕಿಳಿಸುತ್ತದೆ. ಒಂದು ಬದಿಯ ಎರಡು ಕಾಲುಗಳನ್ನು ಮುಂದಕ್ಕೆ ಚಾಚುವಾಗ ಇನ್ನೊಂದು ಬದಿಯ ಎರಡು ಕಾಲುಗಳು ನೆಲದಲ್ಲಿ ಭದ್ರವಾಗಿ ಊರಿರುತ್ತವೆ. ಇದು ಒಂದು ರೀತಿಯ ಓಲಾಟದ ಕ್ರಿಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಒಂಟೆಗೆ ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಧೂಳಿನಿಂದ ರಕ್ಷಣೆ ಪಡೆದುಕೊಳ್ಳಲು ತನ್ನ ಮೂಗಿನ ಹೊಳ್ಳೆಗಳನ್ನು ಮುಚ್ಚಿಕೊಳ್ಳುವ ಸಾಮರ್ಥ್ಯವನ್ನು ಒಂಟೆಯು ಹೊಂದಿದ್ದು, ಕಣ್ಣುರೆಪ್ಪೆಗಳು ಕಣ್ಣುಗಳಿಗೆ ರಕ್ಷಣೆಯನ್ನು ನೀಡುತ್ತವೆ. ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂಟೆಯು ಮೂರು ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳ ಎರಡು ಪದರಗಳನ್ನು ಹೊಂದಿದೆ. ಉದ್ದನೆಯ ರೆಪ್ಪೆಗಳು ಬಲವಾದ ಗಾಳಿ ಬೀಸಿದಾಗ ಮರಳು ಕಣ್ಣುಗಳಿಗೆ ನುಗ್ಗದಂತೆ ರಕ್ಷಣೆ ನೀಡುತ್ತದೆ.

ಒಂದು ವೇಳೆ ಮರಳು ಕಣ್ಣಿನೊಳಗೆ ಸೇರಿಕೊಂಡರೆ ಅದನ್ನು ಹೊರಹಾಕಲು ಮೂರನೇ ಕಣ್ಣುಗುಡ್ಡೆಯನ್ನು ಒಂಟೆಯು ಹೊಂದಿದೆ. ಈ ಹೆಚ್ಚುವರಿ ಕಣ್ಣುಗುಡ್ಡೆಯು ಒಂದು ಬದಿಯಿಂದ ಇನ್ನೊಂದು ಬದಿಗೆ ಸರಿದಾಡುತ್ತ ಮರಳನ್ನು ಹೊರಗೆ ಹಾಕುತ್ತದೆ. ಕಣ್ಣುಗುಡ್ಡೆಗಳು ತುಂಬ ತೆಳುವಾಗಿರುವುದರಿಂದ ಅದರ ಮೂಲಕ ನೋಡಲು ಒಂಟೆಗೆ ಸಾಧ್ಯವಾಗುತ್ತದೆ. ಹೀಗಾಗಿ ಅದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡೇ ಮರಳು ಗಾಳಿಯಲ್ಲಿ ಮುಂದಕ್ಕೆ ಸಾಗಬಲ್ಲುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News