ಭಾರತದಲ್ಲಿ ಹುಟ್ಟುವ ಪ್ರತಿ ಮಗುವೂ ರಾಜಕಾರಣಿ : ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಪ್ರಧಾನಿ ಮೋದಿ

Update: 2018-02-16 10:27 GMT

ಹೊಸದಿಲ್ಲಿ,ಫೆ.16 : ಕಳೆದ ಲೋಕಸಭಾ ಚುನಾವಣೆಯ ಮೊದಲು ತಮ್ಮ ಚಾಯ್ ಪೆ ಚರ್ಚಾ ಕಾರ್ಯಕ್ರಮದ ಮೂಲಕ ಮತದಾರರನ್ನು ಪ್ರಧಾನಿ ನರೇಂದ್ರ ಮೋದಿ ಸೆಳೆದಿದ್ದರು, ಈ ಬಾರಿ ಪ್ರಧಾನಿ ತಮ್ಮ ಗಮನವನ್ನು  ಸದ್ಯದಲ್ಲಿಯೇ ತಮ್ಮ ವಾರ್ಷಿಕ ಪರೀಕ್ಷೆ ಎದುರಿಸಲಿರುವ  ವಿದ್ಯಾರ್ಥಿಗಳತ್ತ ಹರಿಸಿ ಅವರೊಂದಿಗೆ  ಪರೀಕ್ಷಾ ಪರ್ ಚರ್ಚಾ ಕಾರ್ಯಕ್ರಮವನ್ನು ಇಂದು ನಡೆಸಿದ್ದಾರೆ.

ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ ಪ್ರಧಾನಿ ಪರೀಕ್ಷೆಯ ವಿಚಾರದಲ್ಲಿ ಅವರಿಗಿರುವ ಆತಂಕವನ್ನು ದೂರ ಮಾಡುವ ಪ್ರಯತ್ನ  ನಡೆಸಿದ್ದಾರೆ.  ರಾಜಧಾನಿಯ ತಾಲ್‍ಕಟೋರಾ ಸ್ಟೇಡಿಯಂನಲ್ಲಿ ನಡೆದ ಈ ಕಾರ್ಯಕ್ರಮವನ್ನು ದೇಶಾದ್ಯಂತ ವಿದ್ಯಾರ್ಥಿಗಳು ವೀಕ್ಷಿಸಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರಶ್ನೆಗಳನ್ನು ಎದುರಿಸುವ ಮೊದಲು ಮಾತನಾಡಿದ ಪ್ರಧಾನಿ ಇಂದು ತಮಗೆ ಪರೀಕ್ಷೆ ಎಂದರಲ್ಲದೆ ತಮ್ಮ ಶಿಕ್ಷಕರಿಗೆ ಧನ್ಯವಾದ ಹೇಳುತ್ತಾ ಅವರ ಪಾಲಿಗೆ ತಾನೀಗಲೂ ವಿದ್ಯಾರ್ಥಿ ಎಂದರು.

ಆತ್ಮವಿಶ್ವಾಸವನ್ನು ಹೇಗೆ ಕಾಯ್ದುಕೊಳ್ಳುವುದು ಎಂಬ ಪ್ರಶ್ನೆಗೆ “ಅದೇನೂ ಒಂದು ಗುಳಿಗೆ ಅಥವಾ ಔಷಧೀಯ ಸಸ್ಯವಲ್ಲ. ತಕ್ಷಣದ ಆತ್ಮವಿಶ್ವಾಸಕ್ಕೆ ಯಾವುದೇ ಗುಳಿಗೆಯಿಲ್ಲ. ಅದನ್ನು ಪ್ರತಿ ದಿನ ಬೆಳಸಬೇಕು,'' ಎಂದು ಪ್ರಧಾನಿ ಹೇಳಿದರು.

ಇತರರ ಜತೆ ಸ್ಪರ್ಧೆಗಿಳಿಯದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಪ್ರಧಾನಿ ತಮ್ಮ ಮಕ್ಕಳನ್ನು ಇತರರಿಗೆ ಹೋಲಿಸಿ ಅವರ ಮೇಲೆ ಇತ್ತಡ ಹೇರದಂತೆ ಹೆತ್ತವರಿಗೂ ಕಿವಿ ಮಾತು ಹೇಳಿದರು. “ನಿಮ್ಮ ಕನಸುಗಳನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ, ನಿಮ್ಮ ಮಕ್ಕಳಿಗೆ ಸ್ನೇಹಿತರಾಗಿರಿ,” ಎಂದು ಪ್ರಧಾನಿ ಸಲಹೆ ನೀಡಿದರು.

ಮಕ್ಕಳು ಹುಟ್ಟು ರಾಜಕಾರಣಿಗಳು ಎಂದು ಹೇಳಿದ ಪ್ರಧಾನಿ ಅವರಿಗೆ ತಮ್ಮ ಕೆಲಸ ಹೇಗೆ ಮಾಡಬೇಕೆಂದು ತಿಳಿದಿದೆ ಎಂದರು. ಐಕ್ಯು ಹಾಗೂ ಇಕ್ಯು ನಡುವೆ ಸಮತೋಲನ ಸಾಧಿಸಬೇಕು ಎಂದು ಅವರು ಹೇಳಿದರು.

ಪ್ರಧಾನಿ ತಮ್ಮ ಕೃತಿ ಎಕ್ಸಾಮ್ ವಾರಿಯರ್ಸ್  ಬಿಡುಗಡೆಗೊಳಿಸಿದ ಕೆಲವೇ ದಿನಗಳಲ್ಲಿ `ಎಕ್ಸಾಮ್ ಕಿ ಬಾತ್' ಎಂದೇ ಕರೆಯಲ್ಪಟ್ಟ ಇಂದಿನ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ. `ವಾರಿಯರ್ಸ್  ಆಗಿ (ಹೋರಾಟಗಾರರಾಗಿ) ವರಿಯರ್ಸ್ (ಚಿಂತಾಕ್ರಾಂತ) ಆಗಬೇಡಿ,'' ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News