ಇದ್ದಕ್ಕಿದ್ದಂತೆ ಪೇಟಿಎಂ ಮಾಲಕನಿಗೆ ಫೇಸ್ ಬುಕ್ ದುಷ್ಟತೆ ಬಗ್ಗೆ ಜ್ಞಾನೋದಯ

Update: 2018-02-16 10:35 GMT
ವಿಜಯ್ ಶೇಖರ್ ಶರ್ಮ

ಹೊಸದಿಲ್ಲಿ,ಫೆ.16 : ದೇಶದ ಅತ್ಯಂತ ದೊಡ್ಡ ಮೊಬೈಲ್ ವ್ಯಾಲೆಟ್ ಕಂಪೆನಿ ಪೇಟಿಎಂ ಇದರ ಸ್ಥಾಪಕ ವಿಜಯ್ ಶೇಖರ್ ಶರ್ಮ ಫೇಸ್ ಬುಕ್ ವಿರುದ್ಧ ಕಿಡಿ ಕಾರಿದ್ದಾರೆ ಹಾಗೂ ಅದನ್ನು ಜಗತ್ತಿನ ಅತ್ಯಂತ ದುಷ್ಟ ಕಂಪೆನಿಯೆಂದು ತಾನು ನಂಬಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಆಂಗ್ಲ ಪತ್ರಿಕೆಯ ಜತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು  ಜನಪ್ರಿಯ ಮೆಸೆಂಜರ್ ಆ್ಯಪ್ - ವಾಟ್ಸ್ಯಾಪ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ  “ಈ ಹಿಂದೆ ಅವರು ಫ್ರೀ ಇಂಟರ್ನೆಟ್ ವಿಚಾರದಲ್ಲಿ ದೇಶವನ್ನು ಮೋಸಗೊಳಿಸಿದರೆ, ಇದೀಗ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಿ  ಆನ್‍ಲೈನ್ ಮತ್ತು ಮೊಬೈಲ್ ಪೇಮೆಂಟ್ ಗಳಿಗಾಗಿ ಮೂರು ಹಂತದ ಪರಿಶೀಲನೆ ಅಗತ್ಯವಿಲ್ಲದ ಆ್ಯಪ್ ಒಂದನ್ನು ಹೊರತರುತ್ತಿದ್ದಾರೆ,'' ಎಂದು ಹೇಳಿದ್ದಾರೆ.

“ವಾಟ್ಸ್ಯಾಪ್ ಸದ್ಯದಲ್ಲಿಯೇ ಆರಂಭಿಸಲಿರುವ  ಪೇಮೆಂಟ್  ಪ್ಲಾಟ್ ಫಾರಂ ವಾಟ್ಸ್ಯಾಪ್ ಪೇ  ಸದ್ಯ ಚಾಲ್ತಿಯಲ್ಲಿರುವ ಓಪನ್ ಯುಟಿಐ ವ್ಯವಸ್ಥೆಯನ್ನು ಕೊಂದೇ ಬಿಡಬಹುದು,'' ಎಂದು  ಕೆಲ ದಿನಗಳ ಹಿಂದೆ ಶರ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು.

ಫೇಸ್ ಬುಕ್ ಮತ್ತು ಶರ್ಮ ನಡುವಿನ ತಿಕ್ಕಾಟ ಇದೇ ಮೊದಲ ಬಾರಿಯೇನಲ್ಲ. ಫೇಸ್ ಬುಕ್ ನ ಇಂಟರ್ನೆಟ್ ಫಾರ್ ಆಲ್, ಫ್ರೀ ಬೇಸಿಕ್ಸ್ ಅನ್ನು ವಿರೋಧಿಸಿದ ಕೆಲ ಭಾರತೀಯ ಉದ್ಯಮಿಗಳಲ್ಲಿ ಶರ್ಮ ಒಬ್ಬರಾಗಿದ್ದರು.

ವಾಟ್ಸ್ಯಾಪ್ ಭಾರತಕ್ಕೆ ಪ್ರಮುಖ ಸೆಕ್ಯುರಿಟಿ ಅಪಾಯವೊಡ್ಡಲಿದೆ ಎಂದು ತಾನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಎನ್ನುತ್ತಾರೆ ಶರ್ಮ. “ಎಲ್ಲರಂತೆಯೇ ಅವರನ್ನೂ ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿಸುವುದರಲ್ಲಿ ತಪ್ಪೇನಿಲ್ಲ, ಆದರೆ ಅವರು ಇಲ್ಲಿಯ ನಿಯಮಗಳನ್ನು ಪಾಲಿಸಬೇಕಷ್ಟೇ,'' ಎಂದು ಅವರು ಹೇಳಿದ್ದಾರೆ.

ಭಾರತದ ಡಿಜಿಟಲ್ ಪೇಮೆಂಟ್ಸ್ ಕ್ಷೇತ್ರದ ಯುದ್ಧದಲ್ಲಿ ಗೆಲುವು ಸಾಧಿಸಲು ಶರ್ಮ ಇದೀಗ ವಾಟ್ಸ್ಯಾಪ್ ಪೇ ವಿರುದ್ಧ ಸಮರ ಸಾರಿದ್ದಾರೆ. ಆದರೆ ಅವರ ಹೇಳಿಕೆಗಳು ಓಪನ್ ಮಾರ್ಕೆಟ್ ಕಲ್ಪನೆಯ ವಿರುದ್ಧವಾಗಿದೆ ಎಂದು ಈಗ ಹಲವರು ಹೇಳಲಾರಂಭಿಸಿದ್ದಾರೆ. ಮೇಲಾಗಿ ವಾಟ್ಸ್ಯಾಪ್ ಪೇ ಇನ್ನೂ ಬೇಟಾ ಟೆಸ್ಟಿಂಗ್ ಹಂತದಲ್ಲಿರುವುದರಿಂದ ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ, ಎಂದು ತಜ್ಞರೂ ಹೇಳುತ್ತಿದ್ದಾರೆ.

ಶರ್ಮ ಹಾಗೂ ಫೇಸ್ ಬುಕ್ ನಡುವಿನ ಸಮರದಿಂದಾಗಿ ವಾಟ್ಸ್ಯಾಪ್ ನ ಬಿಸಿನೆಸ್ ಡೆವಲೆಪ್ಮೆಂಟ್ ಉಪಾಧ್ಯಕ್ಷ ನೀರಜ್ ಅರೋರಾ ಪೇಟಿಎಂ ಮಂಡಳಿಯಿಂದ ಈಗಾಗಲೇ ಹೊರ ನಡೆದಿದ್ದಾರೆ.

“ವಾಟ್ಸ್ಯಾಪ್ ಪೇ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ, ಅದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಇದರ ಎಲ್ಲಾ ನಿಯಮಾವಳಿಗಳನ್ನೂ ಪಾಲಿಸಬೇಕಾಗುತ್ತದೆ. ಅದು ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ತನಕ ಕಾಯಬೇಕು,'' ಎಂದು ಫೇಸ್ ಬುಕ್ ಗೆ ಹತ್ತಿರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News