ಮಣಿಶಂಕರ್ ಅಯ್ಯರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2018-02-16 11:03 GMT

ಕೋಟಾ,ಫೆ.16 : ಪಾಕಿಸ್ತಾನದಲ್ಲಿ ನಡೆದ 9ನೇ ಕರಾಚಿ ಸಾಹಿತ್ಯೋತ್ಸವದಲ್ಲಿ ಉಚ್ಛಾಟಿತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ತಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ ಎಂದು ಹೇಳಿ ಭಾರತವನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಅವರ ವಿರುದ್ಧ  ಬಿಜೆಪಿಯ ಕೋಟಾ ಜಿಲ್ಲಾ ಒಬಿಸಿ ಘಟಕದ ಮುಖ್ಯಸ್ಥ ಅಶೋಕ್ ಚೌಧುರಿ ಇಲ್ಲಿನ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ದೇಶ ದ್ರೋಹ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ನಿಗದಿ ಪಡಿಸಲಾಗಿದೆ.

ಚೌಧುರಿ ಅವರು ಐಪಿಸಿ ಸೆಕ್ಷನ್ 124(ಎ), 500 ಹಾಗೂ 504 ಅನ್ವಯ ಅಯ್ಯರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕರಾಚಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಯ್ಯರ್ ತಾವು ಪಾಕಿಸ್ತಾನವನ್ನು ಪ್ರೀತಿಸುವುದಾಗಿ ಹಾಗೂ ಪಾಕಿಸ್ತಾನೀಯರೂ ತಮ್ಮನ್ನು ಪ್ರೀತಿಸುತ್ತಾರೆ, ಆದರೆ ಭಾರತದಲ್ಲಿ ತಮಗೆ ಅಷ್ಟೇ ದ್ವೇಷ ದೊರೆಯುತ್ತಿದೆ ಎಂದು ಹೇಳಿದ್ದಾರೆಂದು ಚೌಧುರಿ ದೂರಿದ್ದಾರೆ.

ಪಾಕಿಸ್ತಾನದೊಂದಿಗೆ ಮಾತುಕತೆಗಳ ಮೂಲಕ ಭಾರತ ಸಮಸ್ಯೆ ಇತ್ಯರ್ಥ ಪಡಿಸಲು ಆಸಕ್ತಿ ವಹಿಸುತ್ತಿಲ್ಲ ಎಂದು ಹೇಳಿ ಅಯ್ಯರ್ ಭಾರತವನ್ನು ಅವಮಾನಿಸಿದ್ದಾರೆ ಎಂದೂ ಚೌಧುರಿ ಆರೋಪಿಸಿದ್ದಾರೆ. "ಅವರ ಹೇಳಿಕೆಗಳು ನನ್ನ ದೇಶಭಕ್ತಿ ಹಾಗೂ ದೇಶದ  ಬಗ್ಗೆ ಇರುವ ಗೌರವಕ್ಕೆ ನೋವು ತಂದಿದೆ'' ಎಂದು ಚೌಧುರಿ ತಮ್ಮ ಅಪೀಲಿನಲ್ಲಿ  ಹೇಳಿದ್ದಾರಲ್ಲದೆ ಪಾಕಿಸ್ತಾನ ಬೆಂಬಲಿತ ಉಗ್ರರು ದೇಶದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿರುವ ಸಂದರ್ಭ ಅಯ್ಯರ್ ಅವರ ಹೇಳಿಕೆ ಬಂದಿದೆ ಎಂದಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯ ಹಾಗೂ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಅಶೋಕ್ ಪರ್ನಾಮಿ ಅವರು ಪಕ್ಷ ಇತ್ತೀಚೆಗಿನ ಉಪಚುನಾವಣೆಗಳಲ್ಲಿ ಸೋಲಲು ಕಾರಣವೆಂದು ಆರೋಪಿಸಿ ಅವರ ಹುದ್ದೆಗಳಿಗೆ ಬೇರೆ ನಾಯಕರನ್ನು ಆರಿಸಬೇಕೆಂದು ಬಿಜೆಪಿ ಅಧ್ಯಕ್ಷ ಆಮಿತ್ ಶಾಗೆ ಪತ್ರ ಬರೆದು ಇತ್ತೀಚೆಗೆ ಚೌಧುರಿ ಸುದ್ದಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News