ಮೋದಿ, ಶಾರ ಕೀಳುಮಟ್ಟದ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಕಳಂಕ

Update: 2018-02-17 13:46 GMT

ಉಡುಪಿ, ಫೆ.17: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮಗೆ ಆಗದವರ ಮೇಲೆ ಐಟಿ ದಾಳಿ ಹಾಗೂ ಪಕ್ಷಕ್ಕೆ ಸೇರಿಸಿ ಕೊಳ್ಳುವುದಕ್ಕಾಗಿ ಬ್ಲಾಕ್‌ಮೇಲ್‌ನಂತಹ ಕೀಳುಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ವತಿಯಿಂದ ಅಜ್ಜರಕಾಡಿನ ಪುರಭವನದಲ್ಲಿ ಶನಿವಾರ ಆಯೋಜಿಸಲಾದ ‘ಪಂಚಾಯತ್‌ ರಾಜ್ ತಿದ್ದುಪಡಿಗಳ ರಜತ ಸಂಭ್ರಮ ಹಾಗೂ ಪಂಚಾಯತ್ ರಾಜ್ ಮತ್ತು ಸಹಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾ ಡುತಿದ್ದರು.

ಇಂದು ದೇಶ ಒಂದೇ ಕಡೆ ಕೇಂದ್ರೀಕೃತವಾಗುತ್ತಿದೆ. ಎಲ್ಲವನ್ನು ಒಬ್ಬರೇ ನಿಯಂತ್ರಿಸುತ್ತಿದ್ದಾರೆ. ಒಟ್ಟಾರೆ ಇಡೀ ದೇಶದಲ್ಲಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಮಾಧ್ಯಮದವರು ಕೂಡ ಮಾತನಾಡುವಂತಿಲ್ಲ. ಚುನಾ ವಣಾ ಆಯೋಗದ ಮೇಲೂ ನಂಬಿಕೆ ಕಡಿಮೆ ಆಗುತ್ತಿದೆ. ಸಿಬಿಐನಂತಹ ಸಂವಿಧಾನಿಕ ಸಂಸ್ಥೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ಕಡೆ ಹಿಂಸೆ ತಾಂಡವಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಾಶ್ಮೀರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿದಿನ ಸೈನಿಕರ ಹತ್ಯೆ ನಡೆಯು ತ್ತಿದೆ. ಈ ವೈಫಲ್ಯಗಳ ಬಗ್ಗೆ ಉತ್ತರ ಕೊಡಲು ಪ್ರಧಾನಿಗೆ ಪುರುಸೊತ್ತಿಲ್ಲ. ನಾಲ್ಕು ವರ್ಷಗಳಲ್ಲಿ ಪತ್ರಿಕಾಗೋಷ್ಠಿ ಕರೆಯದ ಏಕೈಕ ಪ್ರಧಾನಿ ಅಂದರೆ ನರೇಂದ್ರ ಮೋದಿ. ಕೆಲವು ಟಿವಿ ಮಾಧ್ಯಮಗಳು ನರೇಂದ್ರ ಮೋದಿಯ ಸ್ಪೋಕ್ ಪರ್ಸನ್ ಆಗಿ ಕೆಲಸ ನಿರ್ವಹಿಸುತ್ತಿವೆ. ಸಾಮಾಜಿಕ ಬದಲಾವಣೆ ಮಾಡುವಂತಹ ಒಂದೇ ಒಂದು ಕಾರ್ಯಕ್ರಮವನ್ನು ಮೋದಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಅವರು ದೂರಿದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರ ತೆಗೆದುಕೊಳ್ಳುವ ತೀರ್ಮಾನಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಗ್ರಾಪಂ ಸದಸ್ಯರು ಮಾಡುತ್ತಿದ್ದಾರೆ. ರಾಜ್ಯದಲ್ಲಿ 50,000ದಷ್ಟು ಗ್ರಾಪಂ ಸದಸ್ಯರಿದ್ದು, ಅದರಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯು ಇಡೀ ದೇಶದಲ್ಲೇ ಅತ್ಯುತ್ತಮವಾದ ವ್ಯವಸ್ಥೆಯಾಗಿದೆ. ರಾಜ್ಯದಲ್ಲಿ ನೀಡಿರುವಷ್ಟು ಅಧಿಕಾರ ಬೇರೆ ಯಾವುದೇ ರಾಜ್ಯದಲ್ಲಿಯೂ ನೀಡಿಲ್ಲ. ಈ ಮೂಲಕ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ. ಸಂದೀಪ್, ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಮುರಳಿ ಶೆಟ್ಟಿ, ಪ್ರತಿಭಾ ಕುಳಾಯಿ, ಸರಳಾ ಕಾಂಚನ್, ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ಬ್ಲೋಸಂ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಂಗಳೂರು ಗ್ರಾಪಂ ಸದಸ್ಯ, ವಿಕಲಚೇತನ ಸುಧಾಕರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವೆರಾ ಸ್ವಾಗತಿಸಿದರು. ವರೋನಿಕಾ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು.

‘ಮೋದಿಗೆ ಉತ್ತರ ಕೊಡುವ ತಾಕತ್ತು ಸಿಎಂಗೆ ಮಾತ್ರ’
ಮೋದಿಗೆ ಉತ್ತರ ಕೊಡುವ ತಾಕತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ. ಯಾಕೆಂದರೆ ಅವರು ಜನಪರ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸಲು ಸಾಧ್ಯವಾಗದ ಬಿಜೆಪಿ ಮುಖಂಡರು ಕರ್ನಾಟಕದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಇಡೀ ದೇಶದಲ್ಲೇ ಮುಂಚೂಣಿ ಯಲ್ಲಿರುವ ಕರ್ನಾಟಕ, ಮೋದಿಯ ನೋಟು ರದ್ಧತಿ ಹಾಗೂ ಜಿಎಸ್‌ಟಿ ಇಲ್ಲದಿದ್ದರೆ ಇನ್ನಷ್ಟು ಎತ್ತರಕ್ಕೆ ಏರುತ್ತಿತ್ತು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಪಕ್ಷ ಪಂಚಾಯತ್‌ರಾಜ್ ಬಲವರ್ಧನೆ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗಳನ್ನು ತಂದಿದೆ. ಮಹಿಳಾ ಮೀಸಲಾತಿ ಸೇರಿದಂತೆ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ 70ವರ್ಷಗಳಿಂದ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ದೇಶದ ಬಗ್ಗೆ ಮಾತನಾಡದ ಇವರು ನೆಹರು, ಗಾಂಧಿ ಹಾಗೂ ಅಪ್ರಸ್ತುತ ವಿಚಾರಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News