ನೂತನ ಹೆಬ್ರಿ ತಾಲೂಕು ಉದ್ಘಾಟಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

Update: 2018-02-17 16:46 GMT

ಹೆಬ್ರಿ, ಫೆ.17: ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ನಾಲ್ಕು ತಾಲೂಕುಗಳಲ್ಲಿ (ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ) ತಲಾ 5 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು. ಇದಕ್ಕಾಗಿ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಕಾಗೂಡು ತಿಮ್ಮಪ್ಪ ಹೇಳಿದ್ದಾರೆ.

ಶನಿವಾರ ಹೆಬ್ರಿ ನೂತನ ತಾಲೂಕನ್ನು ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಉದ್ಘಾಟಿಸಿದ ಬಳಿಕ ಹೆಬ್ರಿ ಮಾದರಿ ಶಾಲಾ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು. 

ಜಿಲ್ಲೆಯ ನಾಲ್ಕು ನೂತನ ತಾಲೂಕುಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಶೀಘ್ರದಲ್ಲಿ ಪ್ರಸ್ತಾವನೆಯನ್ನು ಕಳುಹಿಸಿದ್ದಲ್ಲಿ, ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಕಾಗೋಡು ಹೇಳಿದರು.

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ 50 ಹೊಸ ತಾಲೂಕು ಗಳ ರಚನೆಗೆ ಘೋಷಣೆ ಮಾಡಿದ್ದು, 2018ರ ಜನವರಿ 30ರ ತನಕ ಸಂಬಂಧ ಪಟ್ಟ ಎಲ್ಲಾ ಕ್ರಮ ಕೈಗೊಂಡು, ಆಕ್ಷೇಪಗಳನ್ನು ಆಹ್ವಾನಿಸಿ, ಅಂತಿಮ ಅಧಿಸೂಚನೆ ಹೊರಡಿಸಿ ಪ್ರಸ್ತುತ 50 ಹೊಸ ತಾಲೂಕುಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಹೊಸ ತಾಲೂಕುಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲ್ಯಗಳು ಹಾಗೂ ತಹಶೀಲ್ದಾರ್‌ಗಳನ್ನು ನೇಮಕ ಮಾಡಿ, ಶೀಘ್ರವೇ ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲ್ಯ ದೊರೆಯುವಂತೆ ಮಾಡಲಾಗುವುು ಎಂದವರು ಭರವಸೆ ನೀಡಿದರು. 

ಈ ಭಾಗದಲ್ಲಿ ಭೂಮಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದು, ಡ್ರೀಮ್ಡ್ ಪಾರೆಸ್ಟ್ ಸಮಸ್ಯೆ ಸಹ ಇದೆ. ಡ್ರೀಮ್ಡ್ ಫಾರೆಸ್ಟ್‌ನಿಂದ ಅರಣ್ಯ ಭೂಮಿಯನ್ನು ಹೊರಗಿಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿದ್ಧವಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರೆಯಲಿದೆ. ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ಸುಮಾರು 4,000 ಭೂಸುದಾರಣಾ ಅರ್ಜಿಗಳು ಬಾಕಿ ಇದ್ದು, ಬೇಗನೆ ಇತ್ಯರ್ಥಪಡಿಸಲಾಗುವುದು. ಉಡುಪಿ ಮತ್ತು ದ. ಕನ್ನಡ ಜಿಲ್ಲೆಗಳಲ್ಲಿ ಭೂಮಿ ವಿಷಯಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆಯಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಹೊಸ ತಾಲೂಕುಗಳ ಆಡಳಿತದಲ್ಲಿ ಹೊಸ ಶಕ್ತಿ ಬರಬೇಕು. ರಾಜ್ಯ ಸರಕಾರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದು, ಕಂದಾಯ ಇಲಾಖೆ ಯಲ್ಲಿ ಪಾರದರ್ಶಕ ಆಡಳಿತ ನಡೆದರೆ ಎಲ್ಲಾ ಇಲಾಖೆಗಳಲ್ಲಿ ಪಾರದರ್ಶಕತೆ ಮೂಡಲಿದೆ. ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಜನಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಾಗೋಡು ಹೇಳಿದರು. 

ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ಹೊಸ ತಾಲೂಕಿನಿಂದ ಅಭಿವೃದ್ದಿ ಕೆಲಸಗಳು ಕ್ಷಿಪ್ರವಾಗಿ ನಡೆದು, ಸಾರ್ವಜನಿಕರಿಗೆ ಎಲ್ಲಾ ರೀತಿಯ ಪ್ರಯೋಜನ ದೊರೆಯಲಿ ಎಂದು ಆಶಿಸಿದರು. 

ಕಾರ್ಕಳ ಶಾಸಕ ಹಾಗೂ ವಿಧಾನಸಭೆಯ ವಿರೋಧಪಕ್ಷದ ಮುಖ್ಯ ಸಚೇತಕ ವಿ. ಸುನೀಲ್‌ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ. ಜಿಪಂ ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ಗ್ರಾಪಂ ಅಧ್ಯಕ್ಷ ಸುಧಾಕರ್ ಹೆಗ್ಡೆ, ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್ ಮತ್ತಿತರರು ಉಪಸ್ಥಿತರಿದ್ದರು.

ಹೆಬ್ರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್ ಜೋಯಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಮಹಾದೇವಯ್ಯ ಸ್ವಾಗತಿಸಿ, ಸೀತಾನದಿ ವಿಠಲ ಶೆಟ್ಟಿ ಹಾಗೂ ಟಿ.ಜಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News