ಮೆಹುಲ್ ಚೊಕ್ಸಿ ಬಗ್ಗೆ ಎಚ್ಚರಿಕೆ ನೀಡಿದ್ದರೂ ಯಾರೂ ಕಿವಿಗೊಡಲಿಲ್ಲ: ಅಲಹಾಬಾದ್ ಬ್ಯಾಂಕಿನ ಮಾಜಿ ನಿರ್ದೇಶಕ

Update: 2018-02-17 13:05 GMT

ಹೊಸದಿಲ್ಲಿ, ಫೆ.17: ಪಂಜಾಬ್ ನ್ಯಾಷನಲ್ ಬ್ಯಾಂಕಿನ 11,400 ಕೋಟಿ ರೂ. ಅವ್ಯವಹಾರದಲ್ಲಿ ಆರೋಪಿಯಾಗಿರುವ ನೀರವ್ ಮೋದಿ ಹಾಗೂ ಮೆಹುಲ್ ಚೊಕ್ಸಿ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವು ಪಡೆಯುತ್ತಿದೆ. ಅವರಿಬ್ಬರ ಪಾಸ್ ಪೋರ್ಟ್ ಅನ್ನು ನಾಲ್ಕು ವಾರಗಳ ಕಾಲ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಾರಿ ನಿರ್ದೇಶನಾಲಯದ ಸಲಹೆಯಂತೆ  ರದ್ದುಗೊಳಿಸಿದೆ.

ಈತನ್ಮಧ್ಯೆ ಅಲಹಾಬಾದ್ ಬ್ಯಾಂಕಿನ ಮಾಜಿ ನಿರ್ದೇಶಕ ದಿನೇಶ್ ದುಬೆ ಕುತೂಹಲಕಾರಿ ಮಾಹಿತಿಯೊಂದನ್ನು ಹೊರಗೆಡಹಿದ್ದಾರೆ. "ನಾನು 2013ರಲ್ಲಿಯೇ ಮೆಹುಲ್ ಚೊಕ್ಸಿಗೆ ಸಾಲ ನೀಡುವುದರ ವಿರುದ್ಧ ಸರಕಾರ ಹಾಗೂ ಆರ್‍ಬಿಐ ಗೆ  ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಅವರ ಸಾಲ ಮಂಜೂರುಗೊಳಿಸುವಂತೆ ಹೇಳಲಾಗಿತ್ತು. ಗೀತಾಂಜಲಿ ಜೆಮ್ಸ್ ಈ ಹಿಂದೆ ಪಡೆದ ಸಾಲ ವಾಪಸ್ ಪಡೆಯಲು ಕ್ರಮ ಕೈಗೊಂಡು ನಂತರ ಹೊಸ ಸಾಲ ನೀಡುವಂತೆ ಹೇಳಿದ್ದೆ. ಆದರೆ  ಬ್ಯಾಂಕುಗಳ ಕಾರ್ಯನಿರ್ವಹಣೆಗೆ ಸಾಲ ನೀಡಬೇಕು ಎಂದು ನನಗೆ ತಿಳಿಸಲಾಗಿತ್ತು. ನನ್ನ ಮೇಲೆ ಒತ್ತಡ ಹೇರಲಾಗಿದ್ದರಿಂದ ನಾನು ರಾಜೀನಾಮೆ ನೀಡಿದೆ. ಯುಪಿಎ ಸರಕಾರ ಇದ್ದಾಗ ಆರಂಭವಾದ ಈ ಹಗರಣ ಎನ್‍ಡಿಎ ಸರಕಾರದ ಅವಧಿಯಲ್ಲಿ ಹತ್ತರಿಂದ 50 ಪಟ್ಟು ಅಧಿಕಗೊಂಡಿತು'' ಎಂದು ಅವರು ಹೇಳಿದ್ದಾರೆ.

"2013ರಲ್ಲಿ ತಾನು ಮೆಹುಲ್ ಚೊಕ್ಸಿ ವಿಚಾರವನ್ನು ಎತ್ತಿದಾಗ ಈಗ ಪಿಎನ್‍ಬಿ ಆಡಳಿತ ನಿರ್ದೇಶಕರಾಗಿರುವ ಸುನಿಲ್ ಮೆಹ್ತಾ ಅವರು ಅಲಹಾಬಾದ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿದ್ದರು'' ಎಂದು ದುಬೆ ಹೇಳಿದ್ದಾರೆ.

ಮಾಜಿ ಬ್ಯಾಂಕಿಂಗ್ ಕಾರ್ಯದರ್ಶಿ ರಾಜೀವ್ ಟಕ್ರು ತಾವು ಅಲಹಾಬಾದ್ ಬ್ಯಾಂಕ್ ನಿರ್ದೇಶಕ ದಿನೇಶ್ ದುಬೆಯನ್ನು ಕೇವಲ ಒಮ್ಮೆ ಮಾತ್ರ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. "ಅವರು ರಾಜೀನಾಮೆ ನೀಡಲು ನನ್ನ ಕಚೇರಿಗೆ 2013ರಲ್ಲಿ ಬಂದಿದ್ದರು. ಅವರಿಗೆ ಯಾವುದೋ  ವಿಚಾರದಲ್ಲಿದ್ದ ಅಸಮಾಧಾನದಿಂದ ಅವರು ಹೀಗೆ ಮಾಡಿದ್ದರು. ನಾನು ಅವರ ರಾಜೀನಾಮೆ ಸ್ವೀಕರಿಸಿದೆ. ಅವರ ಜತೆ ನಾನು ಮಾತನಾಡಿಯೇ ಇಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News