ಕೇಂದ್ರ ಸರ್ಕಾರದಿಂದ ಸರ್ವ ಸಮುದಾಯದ ಸ್ವಾವಲಂಬನೆ- ಸಚಿವ ಅನಂತಕುಮಾರ್ ಹೆಗಡೆ

Update: 2018-02-17 14:40 GMT

ಪುತ್ತೂರು, ಫೆ. 17: ರೈತರು ಸೇರಿದಂತೆ ಸರ್ವ ಸಮುದಾಯದ ಸ್ವಾವಲಂಬನೆಗಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದ್ದು, ಪ್ರಸ್ತುತ ಸರ್ಕಾರ ಕೃಷಿಕರಿಗಾಗಿ ಭೋಷಣೆ ಮಾಡಿರುವ ಯೋಜನೆಯನ್ನು ಈತನಕದ ಯಾವುದೇ ಸರ್ಕಾರ ಮಾಡಿಲ್ಲ. ಫೋಷಿಸಲಾದ ಎಲ್ಲಾ ರೈತಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಯೋಜನೆ ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಕೇಂದ್ರದ ಯೋಜನೆ ಉತ್ತರ ನೀಡಲಿದೆ ಎಂದು  ಶನಿವಾರ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಖಾತೆಯ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅಡಿಯಲ್ಲಿ ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರಂಭಗೊಂಡಿರುವ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವಾಗ ಕೇಂದ್ರ ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗಳು ಬಂದಿತ್ತು. ಸಾಲ ಮನ್ನಾ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಕೇಂದ್ರ ಸರ್ಕಾರ ಏನನ್ನೂ ಹೇಳಲು ಸಾಧ್ಯವಿರಲಿಲ್ಲ. ಸಾಲ ಮನ್ನಾ ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಕೇಂದ್ರದ ಬಜೆಟ್‌ನ ರೈತಪರ ಯೋಜನೆ ಉತ್ತರವಾಗಿದೆ. ರೈತರೂ ಸೇರಿದಂತೆ ಸರ್ವ ಸಮುದಾಯಕ್ಕೆ ಸ್ವಾವಲಂಬನೆ ಕಲಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ ಎಂದರು.

ನಮ್ಮದು ಪಂಚವಾರ್ಷಿಕ ಯೋಜನೆಗಳ ಸರಕಾರವಲ್ಲ, ನಮ್ಮದು ವರ್ಷ ವಾರ್ಷಿಕ ಯೋಜನೆಯ ಸರಕಾರ. ನಾವು ಐದು ವರ್ಷಗಳ ಗುರಿ ಇಟ್ಟು ಕೆಲಸ ಮಾಡುತ್ತಿಲ್ಲ. ವರ್ಷ ವರ್ಷದ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದ ಸಚಿವರು ದೇಶದಲ್ಲಿ ಒಂದೂವರೆ ಲಕ್ಷ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಐವತ್ತು ಕೋಟ ಜನರಿಗೆ ವಿಮೆ ಮಾಡಿಸಲಾಗುತ್ತಿದೆ. ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು

ವಿಭಿನ್ನವಾಗಿ ಬದುಕುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಳ್ಳುವುದೇ ಕೌಶಲ್ಯ. ಅನಂತ ಅವಕಾಶಗಳನ್ನು ಸೃಷ್ಟಿ ಮಾಡುವುದೇ ಕೌಶಲ್ಯ. ಸಿಕ್ಕಿದ ಅವಕಾಶವೇ ನಮ್ಮ ಆಯ್ಕೆಯಾಗಬೇಕೋ ಅಥವಾ ನಮ್ಮ ಆಯ್ಕೆಯ ಅವಕಾಶವನ್ನು ಪಡೆಯುವತ್ತ ಮುನ್ನಡೆಯಬೇಕೋ ಎಂದು ಯೋಚಿಸಬೇಕಾಗಿದೆ. ಬದುಕಿಗಾಗಿ ವಿದ್ಯೆಯಲ್ಲ. ವಿದ್ಯೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಬೇರೆಯುವರ ಕಣ್ಣಲ್ಲಿ ಬದುಕು ನೋಡುವ ಬದಲು ನಮ್ಮದೇ ಕಣ್ಣಲ್ಲಿ ಬದುಕು ನೋಡುವ ಪರಿಸ್ಥಿತಿ ನಿರ್ಮಾಣವಾಗಬೇಕು. ಇದಕ್ಕಾಗಿ ಭಾರತ ಸರಕಾರ ಹೊಸತನವನ್ನು ಕಲಿಸುತ್ತಿದೆ ಎಂದು ಹೇಳಿದರು. ತಂತ್ರಜ್ಞಾನ ಸಾಕಷ್ಟು ಬೆಳೆಯುತ್ತಿದೆ. ಇವತ್ತು ಕೇವಲ ಸರ್ಟಿಫಿಕೇಟ್ ಹಿಡಿದುಕೊಂಡರೆ ಏನೂ ಸಾಲದು. ಸೈಬರ್ ಸೆಕ್ಯೂರಿಟಿ ಕೋರ್ಸ್‌ನ್ನು ಎಷ್ಟು ಕಡೆ ಅಳವಡಿಸಲಾಗುತ್ತಿದೆ? ಅದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡರೆ ನಮ್ಮ ಯುವಕರಲ್ಲೇ ಒಂದು ಹಿಡನ್ ಆರ್ಮಿ ಇಟ್ಟುಕೊಳ್ಳಬಹುದು. ಚೀನಾ ಅಥವಾ ಪಾಕಿಸ್ತಾನದೊಂದಿಗೆ ಯುದ್ಧವಾದರೆ ಇಲ್ಲಿ ಕೂತಲ್ಲಿಂದಲೇ ಚೀನಾದ ಎಲ್ಲ ಕಂಪ್ಯೂಟರ್‌ಗಳನ್ನು ಚಿಂದಿ ಉಡಾಯಿಸಬಲ್ಲ ತಂತ್ರಜ್ಞಾನ ಕರಗತ ಮಾಡಿಕೊಳ್ಳಬಹುದು ಎಂದರು.

ರಕ್ತವಿಲ್ಲದೆ ಯುದ್ಧ ಗೆಲ್ಲಲಾಗದು, ಬೆರಸು ಸುರಿಸದೆ ಬದುಕು ಗೆಲ್ಲಲಾಗದು. ನಾವು ಹುಟ್ಟಿದ್ದೇ ಗೆಲ್ಲಲು ಮತ್ತು ನಾವು ಹುಟ್ಟಿದ್ದೇ ಆಳಲು ಎಂಬ ಯೋಚನೆ ಯೊಂದಿಗೆ ಯುವಕರು ಬೆಳೆದರೆ ದೇಶ ಭದ್ರವಾದೀತು ಎಂದ ಅವರು ಸಾಂಪ್ರದಾಯಿಕ ಕೃಷಿಯಿಂದ ಉದ್ಧಾರ ಸಾಧ್ಯವಿಲ್ಲ ಎಂದು ಹೇಳಿದ ಸಚಿವರು, ವರ್ಟಿಕಲ್ ಫಾರ್ಮಿಂಗ್ (ಲಂಬ ಬೇಸಾಯ) ನಮ್ಮ ಈಗಿನ ಆಯ್ಕೆಯಾಗಬೇಕು. ಅದರೊಂದಿಗೆ ಅಕ್ವಾ ಫೋನಿಕ್, ಹೈಡ್ರೋ ಫೋನಿಕ್ ಮತ್ತು ಏರೋಫೋನಿಕ್ ವಿಧಾನಗಳ ಕಡೆಗೆ ಜಗತ್ತು ಹೊರಳುತ್ತಿರುವುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರತೀ ಹಳ್ಳಿಯಲ್ಲೂ ವರ್ಚ್ಯುವಲ್ ನೆಟ್‌ವರ್ಕ್ ಆಪರೇಟರ್ಸ್‌ಗೆ ಕೇಂದ್ರ ಸರಕಾರ ಪರವಾನಿಗೆ ನೀಡುತ್ತಿದೆ. ಪ್ರಾದೇಶಿಕ ಕೌಶಲ್ಯ ಅಂತರ ವಿಶ್ಲೇಷಣೆಗೆಂದು ರಾಜ್ಯಕ್ಕೆ ಕೇಂದ್ರ ಅನುದಾನ ನೀಡಿದೆ ಎಂದರು. 

ಭಾಷಾ ತರ್ಜುಮೆ ಸವಾಲು: ಕನ್ನಡವನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡುವುದು ಇವತ್ತಿನ ಸವಾಲಲ್ಲ. ಇಂಗ್ಲೀಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡೋದು ದೊಡ್ಡ ಸವಾಲು. ಶುದ್ಧ ಕನ್ನಡಕ್ಕೆ ತರ್ಜುಮೆ ಮಾಡೋರೇ ಇಲ್ಲ ಎಂಬಂತಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಹೊರತುಪಡಿಸಿದರೆ ಇತರರಿಗೆ ಕನ್ನಡಕ್ಕೆ ಭಾಷಾ ತರ್ಜುಮೆ ಮಾಡುವ ಯೋಗ್ಯತೆಯೇ ಇಲ್ಲ. ಇನ್ನು ಬೆಂಗಳೂರಿನ ಸ್ಥಿತಿ ಚಿಂತಾಜನಕವಾಗಿದ್ದು ಇಲ್ಲಿನ ಪರಿಸ್ಥಿತಿಯನ್ನು ಕೇಳೋದೇ ಬೇಡ ಎಂದು ಸಚಿವರು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಸ್ಥಾಪಕ ಸಂಚಾಲಕರೂ, ಮಾಜಿ ಶಾಸಕರೂ ಆದ ಉರಿಮಜಲು ರಾಮ ಭಟ್, ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್, ಔರಂಗಾಬಾದ್‌ನ ಆರ್.ಎಲ್. ಸ್ಟೀಲ್ ಆ್ಯಂಡ್ ಎನರ್ಜಿ ಲಿಮಿಟೆಡ್‌ನ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಕಾಮತ್, ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಎನ್. ಭಟ್, ಸಂಚಾಲಕ ಮಹದೇವ ಶಾಸ್ತ್ರಿ, ಪ್ರಿನ್ಸಿಪಾಲ್ ಗೋಪಿನಾಥ ಶೆಟ್ಟಿ, ಉಪ ಪ್ರಿನ್ಸಿಪಾಲ್ ಹರೇಕೃಷ್ಣ ಬಿ., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಚಂದ್ರಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News