ನೀರವ್ ಮೋದಿಯನ್ನು ಆರ್‌ಬಿಐ ಗವರ್ನರಾಗಿ ನೇಮಿಸಿ ದೇಶವನ್ನು ಮುಗಿಸಿಬಿಡಿ

Update: 2018-02-17 14:48 GMT

ಮುಂಬೈ, ಫೆ.17: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದಿರುವ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿಯನ್ನು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಿಸಿ ದೇಶವನ್ನು ಮುಗಿಸಿಬಿಡಬೇಕು ಎಂದು ಶಿವಸೇನೆ ‘ಸಲಹೆ’ ನೀಡಿದೆ.

  ಜನವರಿ ತಿಂಗಳ ಆರಂಭದಲ್ಲೇ ನೀರವ್ ಮೋದಿ ಕುಟುಂಬ ಸಮೇತ ದೇಶದಿಂದ ಪಲಾಯನ ಮಾಡಿರುವುದು ಇದೀಗ ಸ್ಪಷ್ಟವಾಗಿದೆ. ಹಾಗಿದ್ದರೂ ಜನವರಿ ಅಂತ್ಯದಲ್ಲಿ ಸ್ವಿಝರ್ಲ್ಯಾಂಡಿನ ದಾವೋಸ್‌ನಲ್ಲಿ ನಡೆದಿದ್ದ ಜಾಗತಿಕ ಸಮ್ಮೇಳನದಲ್ಲಿ ನೀರವ್ ಮೋದಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಗಮ ನಾರ್ಹವಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಪರವಾಗಿರುವ ನೀರವ್, ಚುನಾವಣಾ ಸಂದರ್ಭ ಬಿಜೆಪಿಗೆ ಹಣ ಒಟ್ಟುಗೂಡಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಸೇನೆ ತಿಳಿಸಿದೆ. ಆದರೆ ಪಿಎನ್‌ಬಿ ವಂಚನೆಯಲ್ಲಿ ನೀರವ್‌ಗೆ ಬಿಜೆಪಿ ಮುಖಂಡರ ಕೃಪಾಕಟಾಕ್ಷವಿತ್ತು ಎಂದು ತನ್ನ ಹೇಳಿಕೆಯ ಅರ್ಥವಲ್ಲ. ಅಲ್ಲದೆ ಲೂಟಿ ಮಾಡಿದ ಹಣದಲ್ಲಿ ಸ್ವಲ್ಪ ಅಂಶ ಬಿಜೆಪಿಗೆ ಸಂದಿದೆ ಎಂದೂ ತಾವು ಹೇಳುತ್ತಿಲ್ಲ. ಆದರೆ ತಾನು ಕೂಡಿಟ್ಟ ಬೆಟ್ಟದಷ್ಟು ಹಣದಿಂದ ಬಿಜೆಪಿ ಚುನಾವಣೆ ಗೆಲ್ಲಲು ನೀರವ್ ನೆರವಾಗುತ್ತಿದ್ದರು . ಈ ಹಣ ಸರಕಾರದ ಖಜಾನೆಗೆ ಸೇರಿದ್ದಾಗಿದೆ ಎಂಬುದಂತೂ ಸತ್ಯವಾಗಿದೆ ಎಂದು ಶಿವಸೇನೆ ತಿಳಿಸಿದೆ.

 ತನ್ನ ವಿರುದ್ಧ ದೂರು ದಾಖಲಾಗಿದ್ದರೂ ನೀರವ್ ಮೋದಿ ಲಾವೋಸ್‌ನಲ್ಲಿ ಪ್ರಧಾನಿ ಭಾಗವಹಿಸಿದ್ದ ಸಮಾವೇಶದಲ್ಲಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೇಗೆ ಸಾಧ್ಯವಾಗಿದೆ ಎಂಬ ಪ್ರಶ್ನೆ ಮೂಡುತ್ತದೆ. ಬಹುಷಃ ಅವರ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬಹುದು ಎಂದು ಶಿವಸೇನೆ ಲೇವಡಿ ಮಾಡಿದೆ.

 ದುರಂತವೆಂದರೆ, ಜನಸಾಮಾನ್ಯರು ಆಧಾರ್ ಸಂಖ್ಯೆಯನ್ನು ಜೋಡಿಸದಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತದೆ ಹಾಗೂ ಶವಸಂಸ್ಕಾರಕ್ಕೂ ಆಸ್ಪದ ನೀಡುತ್ತಿಲ್ಲ. ಆದರೆ ಆಧಾರ್ ಕಾರ್ಡ್ ಇಲ್ಲದೆಯೂ ನೀರವ್ ಮೋದಿಯಂತವರು 11,500 ಕೋಟಿ ರೂ.ನಷ್ಟು ಮೊತ್ತವನ್ನು ಬ್ಯಾಂಕ್‌ನಿಂದ ಪಡೆಯಬಹುದಾಗಿದೆ ಎಂದು ಶಿವಸೇನೆ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News