ಲಿಂಗಾನುಪಾತ ಅತಿ ಹೆಚ್ಚು ಇಳಿಕೆಯಾಗಿರುವ ರಾಜ್ಯ ಯಾವುದು ಗೊತ್ತೇ?

Update: 2018-02-17 16:15 GMT

ಹೊಸದಿಲ್ಲಿ, ಫೆ. 17: ದೇಶದ 21 ಅತಿ ದೊಡ್ಡ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಲಿಂಗಾನುಪಾತ (ಎಸ್‌ಆರ್‌ಬಿ) ಇಳಿಕೆಯಾಗುತ್ತಿದೆ. ಗುಜರಾತ್‌ನಲ್ಲಿ ಈ ಅನುಪಾತ ದಿಗಿಲು ಹುಟ್ಟಿಸುವಷ್ಟು 53 ಅಂಕ ಇಳಿಕೆಯಾಗಿದೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಲಿಂಗ ಆಯ್ಕೆ ಮಾಡಿ ಗರ್ಭಪಾತ ಮಾಡುವುದನ್ನು ಪರಿಶೀಲಿಸುವ ಅಗತ್ಯತೆ ಇದೆ ಎಂದು ನೀತಿ ಆಯೋಗ ತಿಳಿಸಿದೆ.

17 ರಾಜ್ಯಗಳಲ್ಲಿ ಗಣನೀಯ 10 ಅಥವಾ ಅದಕ್ಕಿಂತ ಹೆಚ್ಚು ಇಳಿಕೆ ದಾಖಲಾಗಿದೆ. ಈ ಸೂಚ್ಯಂಕದಲ್ಲಿ 2012-14ರಿಂದ 2013-15ರ ವರೆಗೆ ಗುಜರಾತ್‌ನಲ್ಲಿ 1,000 ಪುರುಷರಿಗೆ 907 ಮಹಿಳೆಯರು ಇರಬೇಕಾಗಿತ್ತು. ಆದರೆ, 854 ಮಾತ್ರ ಮಹಿಳೆಯರು ಇದ್ದು, 53 ಅಂಕ ಇಳಿಕೆಯಾಗಿದೆ. ಗುಜರಾತ್‌ನ ನಂತರದ ಸ್ಥಾನವನ್ನು ಹರ್ಯಾಣ ಪಡೆದುಕೊಂಡಿದೆ. ಇಲ್ಲಿ 35 ಅಂಕ ಇಳಿಕೆ ದಾಖಲಾಗಿದೆ. ರಾಜಸ್ತಾನ 32 ಅಂಕ, ಉತ್ತರಾಖಂಡ 27 ಅಂಕ, ಮಹಾರಾಷ್ಟ್ರ 18 ಅಂಕ, ಹಿಮಾಚಲ ಪ್ರದೇಶ 14 ಅಂಕ, ಚತ್ತೀಸ್‌ಗಡ 12 ಅಂಕ, ಕರ್ನಾಟಕ 11 ಅಂಕ ಇಳಿಕೆಯಾಗಿದೆ ಎಂದು ‘ಹೆಲ್ತಿ ಸ್ಟೇಟ್ ಪ್ರೋಗ್ರೆಸಿವ್ ಇಂಡಿಯಾ’ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಲಿಂಗ ಪತ್ತೆ ಪರೀಕ್ಷೆ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಹೆಣ್ಣು ಮಗುವಿನ ಪ್ರಾಮುಖ್ಯತೆ ಪ್ರಚುರಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಕಳೆದ ವಾರ ಬಿಡುಗಡೆಯಾದ ವರದಿ ಹೇಳಿದೆ. ಕೆಲವು ರಾಜ್ಯಗಳಲ್ಲಿ ಜನನ ಲಿಂಗಾನುಪಾತದಲ್ಲಿ ಸುಧಾರಣೆ ಉಂಟಾಗಿದೆ. ಪಂಜಾಬ್ 19 ಅಂಕ, ಉತ್ತರಪ್ರದೇಶ 10 ಅಂಕ ಹಾಗೂ ಬಿಹಾರ್ 9 ಅಂಕ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ. ಆಯ್ಕೆ ಮಾಡಿ ಗರ್ಭಪಾತ ಮಾಡುವುದರಿಂದ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಆಗುತ್ತಿರುವ ಇಳಿಕೆಯ ತೀವ್ರತೆಯ ಪ್ರಮುಖ ಸೂಚಕ ಲಿಂಗಾನುಪಾತ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News