ಪಾತಕಿಗೆ ಮರಣದಂಡನೆ ವಿಧಿಸಿದ ಪಾಕ್ ನ್ಯಾಯಾಲಯ

Update: 2018-02-17 16:38 GMT

ಲಾಹೋರ್, ಫೆ. 17: ಪಾಕಿಸ್ತಾನದಲ್ಲಿ ಇತ್ತೀಚೆಗೆ ಭಾರೀ ಕೋಲಾಹಲವನ್ನು ಎಬ್ಬಿಸಿದ 7 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗೆ ಶನಿವಾರ ಇಲ್ಲಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ.

ಲಾಹೋರ್ ಸಮೀಪದ ಕಸೂರ್ ಜಿಲ್ಲೆಯಲ್ಲಿ ಜನವರಿ ಮಧ್ಯ ಭಾಗದಲ್ಲಿ ನಡೆದ ಬಾಲಕಿಯ ದಾರುಣ ಸಾವನ್ನು ಪ್ರತಿಭಟಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆದಿದ್ದವು ಹಾಗೂ ಸರಕಾರದ ನಿಷ್ಕ್ರಿಯತೆ ವಿರುದ್ಧ ಮಾಧ್ಯಮಗಳು ಬೆಂಬಿಡದೆ ವರದಿ ಮಾಡಿದ್ದವು. ಅದರ ಫಲವಾಗಿ ಶಂಕಿತ ಸರಣಿ ಹಂತಕನೋರ್ವನನ್ನು ಬಂಧಿಸಲಾಗಿತ್ತು.

ಬಾಲಕಿ ಝೈನಾಬ್ ಅನ್ಸಾರಿಯ ಮೃತದೇಹ ಆಕೆ ನಾಪತ್ತೆಯಾದ 4 ದಿನಗಳ ಬಳಿಕ ಕಸೂರ್ ಜಿಲ್ಲೆಯ ಕಸದ ತೊಟ್ಟಿಯೊಂದರಲ್ಲಿ ಪತ್ತೆಯಾಗಿತ್ತು.

‘‘ಬಾಲಕಿ ಝೈನಾಬ್‌ಳ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಅಪರಾಧಿಗೆ 4 ಮರಣ ದಂಡನೆ ಮತ್ತು 1 ಜೀವಾವಧಿ ಶಿಕ್ಷೆ ವಿಧಿಸಿದೆ’’ ಎಂದು ಸರಕಾರಿ ವಕೀಲ ಇಹ್ತಿಶಾಮ್ ಕಾದಿರ್ ಶಾ ‘ರಾಯ್ಟರ್ಸ್’ಗೆ ತಿಳಿಸಿದರು.

ಆತ ಸರಣಿ ಅತ್ಯಾಚಾರಿ-ಹಂತಕ

ಝೈನಾಬ್ ಕೊಲೆ ವರ್ಷದಲ್ಲಿ ಆ ಪ್ರದೇಶದಲ್ಲಿ ನಡೆದ ಈ ಮಾದರಿಯ 12ನೆ ಕೊಲೆಯಾಗಿತ್ತು ಎಂಬುದಾಗಿ ಸ್ಥಳೀಯರು ಹೇಳಿದ್ದಾರೆ.

ಇದೇ ರೀತಿಯಲ್ಲಿ ಹತ್ಯೆಯಾದ 8 ಬಾಲಕಿಯರು ಹಾಗೂ ಝೈನಾಬ್‌ಳ ದೇಹಗಳಲ್ಲಿ ಪತ್ತೆಯಾದ ಡಿಎನ್‌ಎಗಳು ಹಂತಕ 24 ವರ್ಷದ ಇಮ್ರಾನ್ ಅಲಿಯ ಡಿಎನ್‌ಎಗೆ ತಾಳೆಯಾಗಿವೆ ಎಂಬುದಾಗಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೇಳಿದ್ದಾರೆ.

ಇತರ ಪ್ರಕರಣಗಳಿಗೆ ಸಂಬಂಧಿಸಿ ಇಮ್ರಾನ್ ವಿರುದ್ಧ ಬಳಿಕ ವಿಚಾರಣೆ ನಡೆಸಲಾಗುವುದು ಎಂದರು.

ಅಪರಾಧಿಯು ಬಾಲಕಿಯ ನೆರೆಕರೆಯವನೇ ಆಗಿದ್ದಾನೆ. ಬಾಲಕಿಯು ಅಪಹರಣಕ್ಕೊಳಗಾದ ದಿನ ಆಕೆ ಓರ್ವ ವ್ಯಕ್ತಿಯೊಡನೆ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯೊಂದರಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News