ಛಾಯಾಚಿತ್ರಗ್ರಾಹಕ ಕಮ್ರಾನ್ ಯೂಸುಫ್‌ರನ್ನು ಬಿಡುಗಡೆಗೊಳಿಸಿ

Update: 2018-02-17 16:41 GMT

ಹೊಸದಿಲ್ಲಿ, ಫೆ.17: ಜಮ್ಮು ಕಾಶ್ಮೀರದ ಹವ್ಯಾಸಿ ಛಾಯಾಚಿತ್ರಗ್ರಾಹಕ ಪತ್ರಕರ್ತ(ಫೋಟೋ ಜರ್ನಲಿಸ್ಟ್) ಕಮ್ರಾನ್ ಯೂಸುಫ್‌ರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಜಾಗತಿಕ ಪತ್ರಕರ್ತರ ಸಂಘಟನೆ ಸಿಪಿಜೆ ರಾಷ್ಟ್ರೀಯ ತನಿಖಾ ಮಂಡಳಿ(ಎನ್‌ಐಎ)ಯನ್ನು ಆಗ್ರಹಿಸಿದೆ.

ಕಮ್ರಾನ್ ಯೂಸುಫ್ ರಾಷ್ಟ್ರವಿರೋಧಿ ಕೃತ್ಯ ನಡೆಸುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೆ ಕಾಶ್ಮೀರದಲ್ಲಿ ಕಲ್ಲೆಸೆಯುವವರ ಜೊತೆ ಸೇರಿಕೊಂಡು ಭದ್ರತಾ ಪಡೆಗಳತ್ತ ಕಲ್ಲೆಸೆದಿದ್ದರು ಎಂದು ಆರೋಪಿಸಿ ಕಳೆದ ವರ್ಷದ ಸೆ.7ರಂದು ಎಫ್‌ಐಆರ್ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿತ್ತು.

ಯೂಸುಫ್ ನಿಜವಾದ ಪತ್ರಕರ್ತನಲ್ಲ. ಯಾವುದೇ ಸಮಾರಂಭದ ಉದ್ಘಾಟನೆಯ ಫೋಟೋ ಅವರು ತೆಗೆದಿಲ್ಲ. ಅಥವಾ ಅಭಿವೃದ್ಧಿ ಕಾರ್ಯಕ್ರಮಗಳ ಸಭೆ, ರಾಜಕೀಯ ಮುಖಂಡರು ನಡೆಸಿದ ಸಭೆಯಲ್ಲಿ ಅವರು ಭಾಗವಹಿಸಿಲ್ಲ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

 ಒಬ್ಬ ‘ನೈಜ ಪತ್ರಕರ್ತ’ ಹೇಗೆ ಕಾರ್ಯನಿರ್ವಹಿಸಬೇಕು. ಯಾವ ಕಾರ್ಯಕ್ರಮಗಳ ಫೋಟೋ ತೆಗೆಯಬೇಕು ಎಂಬುದನ್ನು ಎನ್‌ಐಎ ನಿರ್ಧರಿಸಬೇಕಿಲ್ಲ. ಕಮ್ರಾನ್ ಯೂಸುಫ್ ಜಮ್ಮು ಕಾಶ್ಮೀರದಲ್ಲಿ ನಡೆದ ಗಲಭೆಯ ಫೋಟೋ ತೆಗೆದಿರುವುದು ಅವರು ನಿರ್ವಹಿಸಿರುವ ಸಾರ್ವಜನಿಕ ಸೇವೆಯಾಗಿದೆ. ನೈಜ ಪತ್ರಿಕಾಧರ್ಮ ಮೆರೆದಿರುವ ಯೂಸುಫ್‌ರ ವಿರುದ್ಧ ದಾಖಲಿಸಲಾಗಿರುವ ಆರೋಪವನ್ನು ಎನ್‌ಐಎ ಕೈಬಿಟ್ಟು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ‘ಪತ್ರಕರ್ತರ ರಕ್ಷಣೆಗಿರುವ ಸಮಿತಿ’(ಸಿಪಿಜೆ)ಯ ಏಶ್ಯಾ ಕಾರ್ಯಕ್ರಮ ಸಂಯೋಜಕ ಸ್ಟೀವನ್ ಬಟ್ಲರ್ ಒತ್ತಾಯಿಸಿದ್ದಾರೆ. ‘ಸಿಪಿಜೆ’ ಪತ್ರಿಕಾ ಸ್ವಾತಂತ್ರದ ರಕ್ಷಣೆಗಾಗಿ ಕಾರ್ಯನಿರ್ವಹಿಸುವ ಜಾಗತಿಕ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News