ರಾಜ್ಯಗಳ ನಿಲುವನ್ನು ಪಡೆದ ನಂತರ ಕೃಷಿ ಮಾರುಕಟ್ಟೆ ನೀತಿ ರಚನೆ: ಕೃಷಿ ಸಚಿವ

Update: 2018-02-18 17:04 GMT

 ಹೊಸದಿಲ್ಲಿ, ಫೆ.18: ಕೃಷಿ ಬೆಳೆಗಳ ಬೆಲೆಯಲ್ಲಿ ಸರಕಾರವು ನಿಗದಿಪಡಿಸಿದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತಲೂ ಇಳಿಕೆ ಕಂಡ ಸ್ಥಿತಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುವ ಕುರಿತು ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಕೇಂದ್ರ ಸರಕಾರವು ನೀತಿಯನ್ನು ರಚಿಸಲಿದೆ ಎಂದು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ತಿಳಿಸಿದಂತೆ 23 ಬೆಳೆಗಳಿಗೆ ಶೇ. 50 ಲಾಭಾಂಶ ಮತ್ತು ಮಾರುಕಟ್ಟೆಯಲ್ಲಿ ಉಂಟಾಗುವ ನಷ್ಟಕ್ಕೆ ಪರಿಹಾರ ಒದಗಿಸುವ ಭರವಸೆಯನ್ನು ಈಡೇರಿಸುವ ಸಲುವಾಗಿ ಕೇಂದ್ರವು ಮಾರ್ಚ್ ಮೊದಲ ವಾರದಲ್ಲಿ ರಾಜ್ಯಗಳ ಜೊತೆ ಮಾತುಕತೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಕುರಿತು ರಾಜ್ಯ ಸರಕಾರಗಳಿಗೆ ಈಗಾಗಲೇ ಪತ್ರಗಳನ್ನು ರವಾನಿಸಲಾಗಿದೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಕೆಲವು ಪ್ರಮುಖ ಬೆಳೆಗಳ ಬೆಲೆಯು ಕನಿಷ್ಟ ಬೆಂಬಲ ಬೆಲೆಗಿಂತಲೂ ಕಡಿಮೆಯಾದ ಪರಿಣಾಮವಾಗಿ ಕಳೆದ ವರ್ಷ ಬಿಜೆಪಿ ಆಳ್ವಿಕೆಯ ರಾಜ್ಯಗಳೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಶೇ. 50 ಲಾಭಾಂಶ ವಾಪಸ್ ನೀಡುವ ಸಲುವಾಗಿ ಕೃಷಿಗಾಗಿ ಮಾಡಲಾದ ವೆಚ್ಚವನ್ನು ಲೆಕ್ಕಹಾಕಲು ಕೇಂದ್ರವು ಹೆಚ್ಚಾಗಿ ಚಾಲ್ತಿಯಲ್ಲಿರುವ ಎ2+ಎಫ್‌ಎಲ್ ಸಿದ್ಧಾಂತವನ್ನು ಬಳಸಲಿದೆ. ಇದರಲ್ಲಿ ರೈತರು ಕೈಯಿಂದ ಹಾಕಿರುವ ಹಣದ ಜೊತೆಗೆ ಕುಟುಂಬ ಕಾರ್ಮಿಕರ ಮೌಲ್ಯವನ್ನೂ ಲೆಕ್ಕಹಾಕಲಾಗುತ್ತದೆ.

ರೈತ ಸಂಘಟನೆಗಳು ಇದಕ್ಕಿಂತಲೂ ಸೂಕ್ತವಾದ ಸಿದ್ಧಾಂತ ಸಿ2 ಅನ್ನು ಬಳಸಲು ಆಗ್ರಹಿಸುತ್ತಲೇ ಬಂದಿದ್ದಾರೆ. ಸಿ2 ಪ್ರಕಾರ, ರೈತ ಹೂಡಿರುವ ಬಂಡವಾಳದ ಜೊತೆಗೆ ಜಮೀನಿನ ಬಾಡಿಗೆಯನ್ನೂ ಲೆಕ್ಕ ಹಾಕಲಾಗುತ್ತದೆ. ರಾಜ್ಯಗಳ ಜೊತೆ ಕೃಷಿ ಸಚಿವಾಲಯದ ಜೊತೆ ನೀತಿ ಆಯೋಗ ಕೂಡಾ ಈ ವಿಷಯವಾಗಿ ಸಮಾಲೋಚನೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯಗಳು ಯಾವ ಮಾದರಿಗೆ ಆದ್ಯತೆ ನೀಡುತ್ತವೆ ಎಂಬುದನ್ನು ಅವಲಂಬಿಸಿ ಕೇಂದ್ರವು ರೈತರಿಗೆ ಪರಿಹಾರ ನೀಡಲು ಎರಡು-ಮೂರು ರೀತಿಯ ವಿಧಾನಗಳನ್ನು ಅಳವಡಿಸಿಕೊಳ್ಳಬಹದು ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ. ಇವುಗಳಲ್ಲಿ, ರೈತರಿಂದ ನೇರವಾಗಿ ಬೆಳೆಯನ್ನು ಖರೀದಿಸುವುದು, ಇರುವ ಬೆಲೆ ಮತ್ತು ಕನಿಷ್ಟ ಬೆಂಬಲ ಬೆಲೆ ಮಧ್ಯೆ ಇರುವ ವ್ಯತ್ಯಾಸವನ್ನು ಪಾವತಿ ಮಾಡುವುದು ಅಥವಾ ಪ್ರತಿ ಬಿತ್ತನೆ ಕಾಲದ ಆರಂಭದಲ್ಲಿ ದೊಡ್ಡ ಮೊತ್ತವನ್ನು ಏಕಕಾಲದಲ್ಲಿ ನೇರವಾಗಿ ಪಾವತಿ ಮಾಡುವುದು ಸೇರಿದೆ. ಈ ಎಲ್ಲಾ ವಿಧಾನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಹಣ ಪಾವತಿ ಮಾಡಲಿದೆ.

ಈ ಯೋಜನೆಗಾಗಿ ಕೇಂದ್ರ ಸರಕಾರ 12,000-15,000 ಕೋಟಿ ವ್ಯಯಿಸುವ ಅಗತ್ಯವಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ರೈತರಿಗಾದ ನಷ್ಟವನ್ನು ಭರಿಸಲು ಯೋಜನೆಯಿದೆ. ತೆಲಂಗಾಣವು ರೈತರಿಗೆ ನೇರವಾಗಿ ದೊಡ್ಡ ಮೊತ್ತವನ್ನು ನೀಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News