ಭೂಕಂಪದ ಅನಾಹುತ ವೀಕ್ಷಣೆ ಮಾಡುತ್ತಿದ್ದ ಹೆಲಿಕಾಪ್ಟರ್ ಪತನ

Update: 2018-02-18 17:14 GMT

ಮೆಕ್ಸಿಕೊ ಸಿಟಿ, ಫೆ. 18: ಪ್ರಬಲ ಭೂಕಂಪವೊಂದು ಸೃಷ್ಟಿಸಿದ ಅನಾಹುತಗಳ ಅಂದಾಜು ನಡೆಸುತ್ತಿದ್ದ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರೊಂದು ದಕ್ಷಿಣ ಮೆಕ್ಸಿಕೊದಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದ್ದು 13 ಮಂದಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.

ಸತ್ತವರು ಮತ್ತು ಗಾಯಗೊಂಡವರೆಲ್ಲರೂ ನೆಲದಲ್ಲಿದ್ದವರು.

ಐವರು ಮಹಿಳೆಯರು, ನಾಲ್ವರು ಪುರುಷರು ಮತ್ತು ಮೂವರು ಮಕ್ಕಳು ಅಪಘಾತ ಸ್ಥಳದಲ್ಲೇ ಮೃತಪಟ್ಟರು ಹಾಗೂ ಓರ್ವ ವ್ಯಕ್ತಿ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಒಕ್ಸಾಕ ಸರಕಾರಿ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಿಕ್ಟರ್ ಮಾಪಕದಲ್ಲಿ 7.2ರ ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ, ಸ್ಥಳೀಯರು ಗದ್ದೆಯೊಂದರಲ್ಲಿ ರಾತ್ರಿ ಕಳೆಯುತ್ತಿದ್ದರು. ಹೆಲಿಕಾಪ್ಟರ್ ಅವರ ಮೇಲೆ ಅಪ್ಪಳಿಸಿತು ಎಂದು ಸರಕಾರಿ ಅಧಿಕಾರಿಯೊಬ್ಬರು ಹೇಳಿದರು.

ವಿಮಾನದಲ್ಲಿ ಒಕ್ಸಾಕ ಗವರ್ನರ್ ಮತ್ತು ಹಿರಿಯ ಅಧಿಕಾರಿಯೋರ್ವರು ಪ್ರಯಾಣಿಸುತ್ತಿದ್ದರು. ಜಮಿಲ್ಟೆಪೆಕ್ ನಗರದಲ್ಲಿ ಖಾಲಿ ಸ್ಥಳವೊಂದರಲ್ಲಿ ಹೆಲಿಕಾಪ್ಟರ್ ಇಳಿಯುತ್ತಿದ್ದಾಗ ಅಪಘಾತ ಸಂಭವಿಸಿದೆ. ವಿಮಾನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News