ಪಿಎನ್‌ಬಿ ವಂಚನೆ ಪ್ರಕರಣ: ಪ್ರಧಾನ ಮಂತ್ರಿಗಳೇ ಮಾತಾಡಿ: ರಾಹುಲ್ ಗಾಂಧಿ

Update: 2018-02-18 17:59 GMT

ಹೊಸದಿಲ್ಲಿ, ಫೆ. 18: ಅಂತಾರಾಷ್ಟ್ರೀಯ ಖ್ಯಾತಿಯ ಆಭರಣ ವಿನ್ಯಾಸಕಾರ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಭಾಗಿಯಾಗಿರುವ 11,300 ಕೋಟಿ ರೂ. ಮೊತ್ತದ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣದ ಕುರಿತು ಮಾತನಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಪಕ್ಷ ಸವಾಲು ಹಾಕಿದೆ. ದೇಶದಲ್ಲಿ ನಡೆದಿರುವ ಅತ್ಯಂತ ಬೃಹತ್ ಹಗರಣಗಳಲ್ಲಿ ಒಂದಾಗಿರುವ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಪ್ರಧಾನಿ ಮೋದಿ ವೌನವಹಿಸಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಪ್ರಧಾನ ಮಂತ್ರಿಗಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸುವ ಬಗ್ಗೆ ಎರಡು ಗಂಟೆಗಳ ಕಾಲ ಮಾತನಾಡಲು ಸಮಯವಿದೆ. ಆದರೆ 22,000 ಕೋಟಿ ರೂ. ಮೊತ್ತದ ಬೃಹತ್ ಹಗರಣದ ಬಗ್ಗೆ ಎರಡು ನಿಮಿಷ ಮಾತನಾಡಲು ಆಗುವುದಿಲ್ಲ. ಜೇಟ್ಲಿಯವರು ಅಡಗಿ ಕುಳಿತಿದ್ದಾರೆ. ನೀವೇ ತಪ್ಪಿತಸ್ಥರು ಎಂಬಂತೆ ವರ್ತಿಸುವುದನ್ನು ನಿಲ್ಲಿಸಿ, ಏನಾದರೂ ಮಾತನಾಡಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ಹಗರಣವು ಎಲ್ಲರೂ ತಿಳಿದಿರುವುದಕ್ಕಿಂತಲೂ ಬಹಳ ದೊಡ್ಡದಾಗಿದೆ. ಸರಕಾರವು ಇನ್ನೊರ್ವ ವ್ಯಕ್ತಿ ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆಯಲು ಅನುವು ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬ್ಯಾಂಕ್ ಹಗರಣಕ್ಕೂ ನೋಟು ಅಮಾನ್ಯೀಕರಣಕ್ಕೂ ಸಂಬಂಧವನ್ನು ಕಲ್ಪಿಸಿರುವ ರಾಹುಲ್ ಗಾಂಧಿ, ಈ ವಂಚನೆಯು ಪ್ರಧಾನಿಯವರು 500 ರೂ. ಮತ್ತು 1000 ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ, ಸಾರ್ವಜನಿಕರ ಬಳಿಯಿರುವ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬರುವಂತೆ ಮಾಡಿದ ನಂತರ ನಡೆದಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ರಾಹುಲ್ ಗಾಂಧಿಯ ಈ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ. ನೋಟು ಅಮಾನ್ಯದ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹಣದ ವಂಚನೆ ನಡೆದಿದೆ. ಪ್ರಮುಖ ಬ್ಯಾಂಕ್ ಅಧಿಕಾರಿಗಳನ್ನು ಬದಲಿಸಲಾಗಿದೆ. ಈ ಹಗರಣದಲ್ಲಿ ಇನ್ನಷ್ಟು ಬ್ಯಾಂಕ್‌ಗಳು ಭಾಗಿಯಾಗಿವೆ. ಈ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕು ಎಂದು ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಮೋದಿಯನ್ನು ಪ್ರಧಾನಿ ಮಾಡುವ ಸಲುವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ ಕೈಗಾರಿಕೋದ್ಯಮಿಗಳ ಸಾಲವನ್ನು ಮೋದಿ ಈಗ ತೀರಿಸುತ್ತಿದ್ದಾರೆ. ಅವರು ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಸಾಲ ನೀಡದಂತೆ ಬ್ಯಾಂಕ್‌ಗಳಿಗೆ ತಾಕೀತು ಮಾಡಿದ್ದಾರೆ ಮತ್ತು ಅದೇ ವೇಳೆ ಶ್ರೀಮಂತ ವ್ಯಕ್ತಿಗಳು ಹಣ ವಂಚನೆಯಲ್ಲಿ ತೊಡಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ಮಮತಾ ಬ್ಯಾನರ್ಜಿ ಕಾಂಗ್ರೆಸ್‌ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಗರಣವು ಯುಪಿಎ ಸರಕಾರದ ಅವಧಿಯಲ್ಲಿ ನಡೆದಿತ್ತು. ಆಗ ಸರಕಾರವು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಗರಣದಲ್ಲಿ ಯುಪಿಎ ಭಾಗಿಯಾಗಿದೆ ಎಂಬುದಕ್ಕೆ ಅಲಹಾಬಾದ್ ಬ್ಯಾಂಕ್‌ನ ಮಾಜಿ ನಿರ್ದೇಶಕ ದಿನೇಶ್ ದುಬೆ ನೀಡಿರುವ ಹೇಳಿಕೆಯೇ ಸಾಕ್ಷಿ ಎಂದು ಸಿನ್ಹಾ ತಿಳಿಸಿದ್ದಾರೆ. ತಾನು ಅಲಹಾಬಾದ್ ಬ್ಯಾಂಕ್‌ನ ನಿರ್ದೇಶಕನಾಗಿದ್ದ ಸಮಯದಲ್ಲಿ ತನ್ನ ಆಕ್ಷೇಪದ ಹೊರತಾಗಿಯೂ ಗೀತಾಂಜಲಿ ಜ್ಯುವೆಲರ್ಸ್‌ಗೆ ಸಾಲವನ್ನು ನೀಡಲಾಗಿತ್ತು. ಆನಂತರ ಹುದ್ದೆಗೆ ರಾಜೀನಾಮೆ ನೀಡುವಂತೆ ತನ್ನ ಮೇಲೆ ಇತ್ತಡ ಹೇರಲಾಗಿತ್ತು ಎಂದು ದುಬೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ವಂಚನೆ ಕುರಿತು ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಿಬಿಐ ಬಳಿ ದೂರು ದಾಖಲಿಸಿದ ದಿನದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News