ಸಾಲಗಾರ ರೈತರು ಬಡ್ಡಿ ಕಡಿತಕ್ಕೆ ಮನವಿ ಮಾಡಬಹುದು: ಕೃಷಿಕರ ರಕ್ಷಣೆಗೆ ಧಾವಿಸಿದ ಸರ್ವೋಚ್ಚ ನ್ಯಾಯಾಲಯ

Update: 2018-02-18 18:01 GMT

ಹೊಸದಿಲ್ಲಿ, ಫೆ.18: ಬೆಳೆ ವೈಫಲ್ಯ ಅಥವಾ ನೈಸರ್ಗಿಕ ವಿಪತ್ತಿನ ಕಾರಣದಿಂದ ಸಾಲವನ್ನು ಮರುಪಾವತಿ ಮಾಡಲಾಗದ ರೈತರು ತಮ್ಮ ಕೃಷಿ ಸಾಲದ ಬಡ್ಡಿಯಲ್ಲಿ ಕಡಿತಗೊಳಿಸುವಂತೆ ನ್ಯಾಯಾಲಯಗಳಲ್ಲಿ ಮನವಿ ಮಾಡಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ. ಆದರೆ ಈ ಸವಲತ್ತನ್ನು ಪಡೆಯಲು ರಾಜ್ಯದಲ್ಲಿ ರೈತ ಸಮುದಾಯವನ್ನು ರಕ್ಷಿಸಲು ಸ್ಥಳೀಯ ಸಾಲ ಪರಿಹಾರ ಕಾನೂನು ಇರಬೇಕಾಗಿರುವುದು ಅನಿವಾರ್ಯ ಎಂದು ಶ್ರೇಷ್ಠ ನ್ಯಾಯಾಲಯ ತಿಳಿಸಿದೆ. ಬ್ಯಾಂಕ್ ಮತ್ತು ಅದರ ಗ್ರಾಹಕರ ಮಧ್ಯೆ ಇರುವ ಷರತ್ತುಗಳನ್ನು ಪುನರ್‌ಪರಿಶೀಲಿಸದಂತೆ ನ್ಯಾಯಾಲಯಗಳನ್ನು ನಿರ್ಬಂಧಿಸುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯು ರಾಜ್ಯ ಸಾಲ ಪರಿಹಾರ ಕಾಯ್ದೆ ಜಾರಿಯಲ್ಲಿರುವ ರಾಜ್ಯಗಳ ಕೃಷಿ ಸಾಲಗಳಿಗೆ ಅನ್ವಯವಾಗುವುದಿಲ್ಲ ಎಂದು ಸುಪ್ರೀ ಕೋರ್ಟ್ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದ ಈ ಆದೇಶದಿಂದ ಕೃಷಿಯಲ್ಲಿ ಉಂಟಾದ ಸಮಸ್ಯೆಯಿಂದ ತಾವು ಸಾಲ ಮರುಪಾವತಿಸಲು ಅಸಮರ್ಥರಾಗಿದ್ದು ಬಡ್ಡಿಯಲ್ಲಿ ಕಡಿತ ಮಾಡುವಂತೆ ಮನವಿ ಮಾಡಲು ರೈತರು ಅರ್ಹರಾಗುತ್ತಾರೆ. ಬ್ಯಾಂಕ್ ಸಾಲ ಮರುಪಾವತಿಸಲಾಗದೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಮ್ಮ ದೇಶದಲ್ಲಿ ಸಂಭವಿಸಿವೆ. ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರ ಸರಕಾರ ರೈತರ ಸಾಲವನ್ನು ಮನ್ನಾ ಮಾಡಿವೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಬಗ್ಗೆ ನ್ಯಾಯಾಂಗವಾಗಲೀ, ರಾಜ್ಯ ಸರಕಾರಗಳಾಗಲೀ ಏನೂ ಹೇಳುವಂತಿಲ್ಲ ಎಂಬ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾದವನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶ ಆರ್.ಎಫ್ ನರಿಮನ್ ಮತ್ತು ನವೀನ್ ಸಿನ್ಹಾ ನೇತೃತ್ವದ ಪೀಠ, ಈ ಕಾಯ್ದೆಯ ಸೆಕ್ಷನ್ 21ಎ ಅನ್ವಯವಾಗುವುದಿಲ್ಲ, ಯಾಕೆಂದರೆ ಜಮೀನು ಅಭಿವೃದ್ಧಿ ಮತ್ತು ಕೃಷಿ ಸಾಲಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯ ಸರಕಾರಗಳಿಗೆ ಸಂಪೂರ್ಣ ಅಧಿಕಾರವಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News