ಮೂಡುಬಿದಿರೆ: ಜೈನ್ ಸ್ಪರ್ಧಿಸದಿದ್ದರೆ ಸಿಗಲಿದೆಯೇ ಬಿಲ್ಲವರಿಗೆ ಪ್ರಾತಿನಿಧ್ಯ?

Update: 2018-02-19 05:40 GMT

ದಕ್ಷಿಣ ಕನ್ನಡದಲ್ಲಿ ಬಿಲ್ಲವರ ಬೇಡಿಕೆ ಈಡೇರಲಿದೆಯೇ?

ಮಂಗಳೂರು, ಫೆ.19: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ನಿರ್ಣಾಯಕ ಸ್ಥಾನದಲ್ಲಿರುವ ಬಿಲ್ಲವರು ದ.ಕ. ಜಿಲ್ಲೆಯಲ್ಲಿ ಕನಿಷ್ಠ ಮೂರು ಸ್ಥಾನಗಳಾದರೂ ಬಿಲ್ಲವ ಪ್ರತಿನಿಧಿಗಳಿಗೆ ದೊರಕಬೇಕೆಂಬ ಉಮೇದಿನಲ್ಲಿದ್ದಾರೆ. ಈ ಬಗ್ಗೆ ವರಿಷ್ಠರ ಗಮನ ಸೆಳೆಯುವ ಪ್ರಯತ್ನಗಳೂ ಸಾಗುತ್ತಿವೆ. ಜಾತಿ ಲೆಕ್ಕಾಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿ ಮತ್ತು ಸದ್ಯ ದ.ಕ. ಜಿಲ್ಲೆಯಲ್ಲಿ ಏಳು ಸ್ಥಾನಗಳಲ್ಲಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ತಲಾ ಮೂರು ಸ್ಥಾನಗಳನ್ನು ನೀಡಬೇಕೆಂದು ಬಿಲ್ಲವರು ಪಕ್ಷಗಳ ನಾಯಕರನ್ನು ಒತ್ತಾಯಿಸುತ್ತಿರುವುದು ಹೊಸ ವಿಚಾರವೇನಲ್ಲ. ಈ ತೆರನಾದ ಜಾತಿವಾರು ರಾಜಕೀಯ ವಿದ್ಯಮಾನಗಳ ನಡುವೆ ಆಡಳಿತ ಪಕ್ಷ ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ಎರಡು ಸ್ಥಾನಗಳಿಗೆ ಅಭ್ಯರ್ಥಿ ಯಾರೆಂದು ನಿರ್ಧರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನುಳಿದ ಸುಳ್ಯ ಕ್ಷೇತ್ರದಲ್ಲಿ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋಲುಂಡ ಡಾ. ರಘು ಟಿಕೆಟ್ ಆಕಾಂಕ್ಷಿಗಳ ಪೈಕಿ ಮುಂಚೂಣಿಯಲ್ಲಿದ್ದಾರೆ. ಆದರೆ ಈಗ ಆಸಕ್ತಿ ಕೆರಳಿಸಿರುವುದು ಆ ಕ್ಷೇತ್ರವಲ್ಲ. ಈಗಾಗಲೇ ಕಾಂಗ್ರೆಸ್ ಕೈಯಲ್ಲಿರುವ, ಅದೂ ಹಿರಿಯ ನಾಯಕರೇ ಶಾಸಕರಾಗಿರುವ ಮುಲ್ಕಿ ಮೂಡುಬಿದಿರೆ ಕ್ಷೇತ್ರ. ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ, ಮಾಜಿ ಸಚಿವ ಅಭಯಚಂದ್ರ ಜೈನ್ ಹಾಲಿ ಶಾಸಕರಾಗಿದ್ದಾರೆ. ಆದರೆ ಕೆಲವು ಸಮಯದ ಹಿಂದೆ ಇದ್ದಕ್ಕಿದ್ದಂತೆ ನಾನು ಯುವಕರಿಗೆ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂದು ಘೋಷಿಸಿಬಿಟ್ಟರು. ಅಲ್ಲಿಂದ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ತಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ ಅಭಯರು ಕ್ಷೇತ್ರದಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಹೇಳಿರುವುದರಿಂದ ಮಿಥುನ್ ರೈ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಹಿಂಬಾಲಕರ ಜೊತೆ ಕ್ಷೇತ್ರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವುದು, ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾದರೆ ಅಲ್ಪಸಂಖ್ಯಾತರ ಮತಗಳು ಹೇಗೂ ಸಿಗಲಿವೆ ಎಂಬ ಲೆಕ್ಕಾಚಾರದಲ್ಲಿ ಗೋವು ಮತ್ತಿತರ ಹೆಸರಲ್ಲಿ ಬಿಜೆಪಿ ಮತಗಳನ್ನು ಸೆಳೆಯುವ ಕಸರತ್ತನ್ನೂ ಮಿಥುನ್ ರೈ ಆರಂಭಿಸಿದ್ದಾರೆ.

ಈ ನಡುವೆ ಮೂಡುಬಿದಿರೆಯಲ್ಲಿ ಹಾಲಿ ಶಾಸಕ ಅಭಯಚಂದ್ರ ಜೈನ್ ಬದಲಿಗೆ ಮಿಥುನ್ ರೈ ಅಭ್ಯರ್ಥಿ ಎಂಬ ಪ್ರಚಾರ ತೆರೆಮರೆಯಲ್ಲಿ ನಡೆಯುತ್ತಿರುವಾಗಲೇ ಕಾಂಗ್ರೆಸ್‌ನೊಳಗೆ ಸಾಮಾಜಿಕ ನ್ಯಾಯದ ಪ್ರಶ್ನೆ ಎದ್ದಿದೆ. ಜಿಲ್ಲೆಯಲ್ಲಿರುವ ಎಂಟು ಕ್ಷೇತ್ರಗಳಲ್ಲಿ ಎರಡರಲ್ಲಿ ಬಂಟರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದಾರೆ. ಅದರಲ್ಲಿ ಒಬ್ಬರು ಅರಣ್ಯ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು. ಇನ್ನೊಬ್ಬರು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ. ಜಿಲ್ಲೆಯ ಅತಿದೊಡ್ಡ ಬಿಲ್ಲವ ಸಮುದಾಯದಿಂದ ಪಕ್ಷದಲ್ಲಿರುವುದು ಒಬ್ಬರು ಶಾಸಕರು ಮಾತ್ರ (ವಸಂತ ಬಂಗೇರ (ಬೆಳ್ತಂಗಡಿ ಕ್ಷೇತ್ರ). ಅವರಿಗೆ ಸಚಿವ ಸ್ಥಾನದ ಮೇಲೆ ಕಣ್ಣಿದ್ದರೂ ಅವರಿಗದು ಸಿಗಲಿಲ್ಲ. ಹೀಗಿರುವಾಗ ಆ ಸಮುದಾಯವನ್ನು ಕೈ ಬಿಟ್ಟು ಮೂರನೇ ಸ್ಥಾನವನ್ನು ಬಂಟರಿಗೆ ಕಾಂಗ್ರೆಸ್ ಕೊಡುವುದು ಹೇಗೆ ಎಂಬ ಪ್ರಶ್ನೆ ಪಕ್ಷದೊಳಗೇ ಎದ್ದಿದೆ.

ಇತ್ತೀಚಿಗೆ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಮೂಡುಬಿದಿರೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಈ ಬಾರಿ ಮತ್ತೆ ಅಭಯಚಂದ್ರ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಕೇಳುವಾಗ ಅಭಯರು ಎದ್ದು ಕೈಮುಗಿದು ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಮುಖ್ಯಮಂತ್ರಿಯೇ ಅಭಯಚಂದ್ರ ಅಭ್ಯರ್ಥಿ ಎಂದು ಹೇಳಿದ ಮೇಲೆ ಟಿಕೆಟ್ ರಾಜಕೀಯಕ್ಕೆ ಹೊಸ ತಿರುವು ಬಂದಿದೆ. ನಾಲ್ಕು ಬಾರಿ ಗೆದ್ದಿರುವ ಹಾಲಿ ಶಾಸಕ ಅಭಯಚಂದ್ರ ಅವರೇ ಮತ್ತೆ ಸ್ಪರ್ಧಿಸುವುದಿದ್ದರೆ ಸ್ಪರ್ಧಿಸಲಿ. ಅವರಿಗೆ ಮುಖ್ಯಮಂತ್ರಿಯ ಬೆಂಬಲವೂ ಇದೆ. ಒಂದು ವೇಳೆ ಅವರು ಸ್ಪರ್ಧಿಸದೆ ಇರಲು ದೃಢ ನಿರ್ಧಾರ ಮಾಡಿದರೆ ಪಕ್ಷ ಜಿಲ್ಲೆಯ ಸದ್ಯದ ಪರಿಸ್ಥಿತಿ, ಜಾತಿ ಲೆಕ್ಕಾಚಾರ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಆಗ್ರಹ ಪಕ್ಷದೊಳಗೆ ಕೇಳಿಬಂದಿದೆ.


ಟಿಕೆಟ್ ನೀಡದಿದ್ದರೆ ಬಿಲ್ಲವರು ಪಕ್ಷದಿಂದ ಇನ್ನಷ್ಟು ದೂರ
ಮುಲ್ಕಿ ಮೂಡುಬಿದಿರೆ ಕ್ಷೇತ್ರದ ರಾಜಕೀಯ ಇತಿಹಾಸ ಹಾಗೂ ಅದರ ಜನಸಂಖ್ಯೆಯೂ ಇಲ್ಲಿ ಚರ್ಚೆಯ ವಸ್ತುವಾಗಿದೆ. ಇಲ್ಲಿ ಹಿರಿಯ ಬಿಲ್ಲವ ನಾಯಕ, ದಿವಂಗತ ಸೋಮಪ್ಪ ಸುವರ್ಣ ಶಾಸಕರಾಗಿದ್ದರು. ಅವರ ಸ್ಥಾನಕ್ಕೆ ಬಳಿಕ ಬಂದವರು ಅಲ್ಪಸಂಖ್ಯಾತ ಜೈನ ಸಮುದಾಯದ ಅಭಯಚಂದ್ರ ಜೈನ್. ಕ್ಷೇತ್ರದಲ್ಲಿ ಅತಿಹೆಚ್ಚು ಜನಸಂಖ್ಯೆ ಇರುವ ಬಿಲ್ಲವ ಸಮುದಾಯ ಅಭಯಚಂದ್ರ ಅವರನ್ನು ಪ್ರತೀ ಚುನಾವಣೆಯಲ್ಲಿ ಬೆಂಬಲಿಸುತ್ತಾ ಬಂದಿದೆ. ಈಗ ಮತ್ತೆ ಅಭಯಚಂದ್ರ ಅವರೇ ಸ್ಪರ್ಧಿಸುವುದಿಲ್ಲ ಎಂದಾದರೆ ಆ ಕ್ಷೇತ್ರದ ಮೇಲೆ ಮೊದಲ ಹಕ್ಕಿರುವುದು ಬಿಲ್ಲವರಿಗೆ. ಹಾಗೆ ಮಾಡದೆ ಏಕಪಕ್ಷೀಯವಾಗಿ ಪಕ್ಷ ಅನನುಭವಿ ಬಂಟ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಇದರಿಂದ ಬಿಲ್ಲವರು ಪಕ್ಷದಿಂದ ಇನ್ನಷ್ಟು ದೂರವಾಗುವ ಸಾಧ್ಯತೆ ಇದೆ ಎಂಬುದು ಪಕ್ಷದೊಳಗಿನ ಬಿಲ್ಲವ ನಾಯಕರ ಅಭಿಪ್ರಾಯ.


ಪಕ್ಷದೊಂದಿಗೆ ಅಷ್ಟಕ್ಕಷ್ಟೇ ಎಂಬಂತಿರುವ ಬಿಲ್ಲವ ಹಿರಿಯ ನಾಯಕ ಜನಾರ್ದನ ಪೂಜಾರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರ ಪಾಲಿಗೆ ಅತ್ಯಂತ ಹಿರಿಯ ನಾಯಕ ಜನಾರ್ದನ ಪೂಜಾರಿ ಈಗ ಪಕ್ಷದೊಂದಿಗೆ ಅಷ್ಟಕ್ಕಷ್ಟೇ ಎಂಬಂತಿದ್ದಾರೆ. ಹಲವಾರು ಬಾರಿ ಪಕ್ಷದ ಧೋರಣೆ ವಿರುದ್ಧ ಮಾತನಾಡಿದ್ದಾರೆ. ಉಸ್ತುವಾರಿ ಸಚಿವರು ಅವರನ್ನು ಅವಮಾನಿಸಿದ್ದಾರೆ ಎಂದು ಅವರ ನಿಕಟವರ್ತಿಗಳು ಆರೋಪಿಸಿದ್ದು, ಅವರು ಇದನ್ನು ಸಾರ್ವಜನಿಕವಾಗಿ ಹೇಳಿ ಕಣ್ಣೀರಿಟ್ಟಿದ್ದೂ ಆಗಿದೆ. ಇನ್ನು ಬಿಲ್ಲವ ಯುವಕರು ಕಾಂಗ್ರೆಸ್‌ನಿಂದ ದೂರವಾಗಿ ಸಂಘ ಪರಿವಾರದ ಮೂಲಕ ಬಿಜೆಪಿಗೆ ಹತ್ತಿರವಾಗಿರುವುದು ಕಳೆದ ಕೆಲವು ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ. ಪೂಜಾರಿಯೊಂದಿಗೆ ಗುರುತಿಸಿಕೊಂಡಿದ್ದ ಹರಿಕೃಷ್ಣ ಬಂಟ್ವಾಳ್ ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಕರಾವಳಿಯಲ್ಲಿ ಹೇಗಾದರೂ ಹಿಂದಿನಂತೆ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಿದೆ. ಹೀಗಿರುವಾಗ ಜಿಲ್ಲೆಯಲ್ಲಿ ಮತ್ತೆ ಕಳೆದ ಬಾರಿಯಂತೆ ಹೆಚ್ಚು ಸ್ಥಾನಗಳನ್ನು ಪಡೆಯಲು ಬಿಲ್ಲವ ಯುವ ಸಮುದಾಯವನ್ನು ಮತ್ತೆ ಪಕ್ಷದ ಕಡೆ ಸೆಳೆಯುವುದು ಕಾಂಗ್ರೆಸ್‌ಗೆ ಅನಿವಾರ್ಯ. ಆದರೆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಹಂಚಿಕೆಯಲ್ಲಿ ಪ್ರಾತಿನಿಧ್ಯ ನೀಡದಿದ್ದರೆ, ಅವರಿಗಿಂತ ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಿದರೆ ಪಕ್ಷ ಪ್ರತಿಕೂಲ ಪರಿಣಾಮವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಾಯಕರನ್ನು ಎಚ್ಚರಿಸುತ್ತಿದ್ದಾರೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.


ಜಿಲ್ಲೆಯಲ್ಲಿ ಮೂವರು ಶಾಸಕರಿರಬೇಕು

ಬಿಲ್ಲವರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಜಿಲ್ಲೆಯಲ್ಲಿ ಮೂರು ಶಾಸಕರಿರಬೇಕು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಮಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಜಿಲ್ಲೆಯ ಬಿಲ್ಲವರು ಆರೋಪಿಸುತ್ತಿದ್ದಾರೆ. ಹೀಗಿರುವಾಗ ಆ ಸಮುದಾಯಕ್ಕೆ ಒಂದೇ ಸ್ಥಾನ ಕೊಟ್ಟು ಜನಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಬಂಟ ಸಮುದಾಯಕ್ಕೆ ಮೂರು ಟಿಕೆಟ್ ಕೊಟ್ಟರೆ ಬಿಲ್ಲವರು ಖಂಡಿತ ಪಕ್ಷದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂಬ ಚರ್ಚೆಯೂ ಪಕ್ಷದೊಳಗೆ ತೆರೆಮರೆಯಲ್ಲಿ ನಡೆಯುತ್ತಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಆರು ಕ್ಷೇತ್ರಗಳಲ್ಲಿಯೂ ಬಿಲ್ಲವ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದೆ. ಪಕ್ಷಗಳು ಸಮುದಾಯಕ್ಕೆ ಆದ್ಯತೆ ನೀಡಿ ಚುನಾವಣೆಯಲ್ಲಿ ಸ್ಥಾನ ನೀಡುವ ಕುರಿತಂತೆಯೂ ಬಿಲ್ಲವ ಸಮುದಾಯದೊಳಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಪತ್ರಿಕಾಗೋಷ್ಠಿಯ ಮೂಲಕ ಸಮುದಾಯದ ನಾಯಕರು ತಮ್ಮ ಬೇಡಿಕೆಯನ್ನು ತಿಳಿಸಲಿದ್ದಾರೆ. 

-ರಾಜಶೇಖರ ಕೋಟ್ಯಾನ್, 
ಮುಲ್ಕಿ ಮೂಡುಬಿದಿರೆ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ, ಕಾಂಗ್ರೆಸ್ ಪಕ್ಷ


ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಅವಧಿಯಿಂದಲೂ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿದೆ. ನಾನು ಕಾಂಗ್ರೆಸ್ ಪಕ್ಷ ಸೇರಿರುವುದಕ್ಕೆ ಇದು ಪ್ರಮುಖ ಕಾರಣ. ಹಾಗೆಯೇ ಬಿಲ್ಲವರಿಗೂ ಪಕ್ಷದಿಂದ ಆದ್ಯತೆ, ಅವಕಾಶ ದೊರಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ಅಧಿಕವಾಗಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು ಮತ್ತು ಕಾಂಗ್ರೆಸ್ ಪಕ್ಷ ನೀಡುತ್ತದೆ ಎನ್ನುವ ವಿಶ್ವಾಸ ನನ್ನದು. 

-ಪ್ರತಿಭಾ ಕುಳಾಯಿ,

ಸ್ಥಾಯಿ ಸಮಿತಿ ಅಧ್ಯಕ್ಷರು, ಮಂಗಳೂರು ಮಹಾನಗರ ಪಾಲಿಕೆ
 


  ಕ್ಷೇತ್ರ                           ಒಟ್ಟು ಮತ                  ಬಿಲ್ಲವರು             

ಮಂಗಳೂರು                   1,86,273                  55,470

ಮಂಗಳೂರು ಉತ್ತರ          2,24,440                  58,000

ಮಂಗಳೂರು ದಕ್ಷಿಣ           2,27,597                  63,100

ಮೂಡುಬಿದಿರೆ                 1,92,321                   62,200

ಬೆಳ್ತಂಗಡಿ                      2,10,020                   90,000

ಬಂಟ್ವಾಳ                      2,10,067                   75,200

ಪುತ್ತೂರು                      1,94,069                   20,220

ಸುಳ್ಯ                           1,92,557                  17,500

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News