ಹೆಜಮಾಡಿಯಲ್ಲಿ ಅಮಿತ್‌ಶಾ ಸ್ವಾಗತ: ಕಾರ್ಯಕರ್ತರಿಗೆ ನಿರಾಶೆ

Update: 2018-02-20 15:05 GMT

ಪಡುಬಿದ್ರೆ, ಫೆ. 20: ಮಲ್ಪೆಯಲ್ಲಿ ನಡೆಯುವ ಮೀನುಗಾರರ ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬೈಕ್ ರ್ಯಾಲಿಯ ಮೂಲಕ ಸ್ವಾಗತಿಸಲು ಮುಂದಾದ ಕಾರ್ಯಕರ್ತರ ಭದ್ರತಾ ಸಿಬ್ಬಂದಿಗಳು ಭದ್ರತೆಯ ದೃಷ್ಠಿಯಿಂದ ತಡೆಯೊಡ್ಡಿದ ಘಟನೆ ನಡೆಯಿತು.

ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುವ ಅಮಿತ್ ಶಾ ಅವರನ್ನು ಜಿಲ್ಲೆಯ ಗಡಿಭಾಗ ಹೆಜಮಾಡಿಯಲ್ಲಿ ಪಕ್ಷದ ವತಿಯಿಂದ ಸ್ವಾಗತಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಧ್ಯಾಹ್ನ 3.30ಕ್ಕೆ ಜಿಲ್ಲೆಗೆ ಆಗಮಿಸುವ ಸುದ್ದಿ ತಿಳಿದು ಕಾರ್ಯಕರ್ತರು ಹೆಜಮಾಡಿಯಲ್ಲಿ ಜಮಾಯಿಸಿದ್ದರು. ಆದರೆ ಸಂಜೆ 6.20ಕ್ಕೆ ಅಮಿತ್ ಶಾ ಅವರು ಜಿಲ್ಲೆ ಪ್ರವೇಶಿಸಿದರು. ಹೆಜಮಾಡಿ ಪ್ರವೇಶಿಸುತ್ತಿದ್ದಂತೆ ಕಾರಿನಲ್ಲಿಯೇ ಅಮಿತ್‌ಶಾ ಜನರತ್ತ ಕೈಬೀಸಿದರು. ಹೆಜಮಾಡಿಯಲ್ಲಿ ಒಂದೆರಡು ನಿಮಿಷ ಕಾರನ್ನು ನಿಲ್ಲಿಸಿದರೂ, ಅವರು ಕಾರಿನಿಂದ ಇಳಿಯಲಿಲ್ಲ. ಈ ವೇಳೆ ಪಕ್ಷದ ಕಾರ್ಯಕರ್ತರು ಕಾರಿನ ಬಾಗಿಲು ತೆರೆದು ಆರತಿ ಬೆಳಗಿ ಸ್ವಾಗತಿಸಿದರು. ಭದ್ರತಾ ಸಿಬ್ಬಂದಿಗಳು ಅವರ ಕಾರನ್ನು ಸುತ್ತುವರೆದು ಕಾರ್ಯಕರ್ತರಿಗೆ ಹಾಗೂ ಮಾಧ್ಯಮ ಮಂದಿಗೆ ತಡೆಯೊಡ್ಡಿದರು. ಕಾರಿನಲ್ಲಿ ಕುಳಿತಿದ್ದ ಅಮಿತ್ ಶಾ ಅವರನ್ನು ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹಾರ ಹಾಕಿ ಸ್ವಾಗತಿಸಿದರು.

ಬೈಕ್ ರ್ಯಾಲಿ ಮೂಲಕ ಸ್ವಾಗತಿಸುವುದೆಂದು ತೀರ್ಮಾನಿಸಿದ್ದರೂ, ಭದ್ರತೆ ಹಾಗೂ ಸುಗಮ ಸಂಚಾರ ದೃಷ್ಟಿಯಿಂದ ಪೊಲೀಸರು ರ್ಯಾಲಿಗೆ ಅನುಮತಿ ನಿರಾಕರಿಸಿದ್ದರು. ಇದರಿಂದ ಹೆಚ್ಚಿನ ಕಾರ್ಯಕರ್ತರು ಮಲ್ಪೆಯ ಸಮಾವೇಶಕ್ಕೆ ಇತರ ವಾಹನಗಳಲ್ಲಿ ತೆರಳಿದರು.

ಪಕ್ಷದ ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನಾ ಗಣೇಶ್, ಸಂಧ್ಯಾರಮೇಶ್, ವೀಣಾ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸದಸ್ಯರಾದ ಸುಮಿತ್ ಬೈಲೂರು, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕೇಸರಿ, ಸುಮಾ ಶೆಟ್ಟಿ, ಮುರಲೀಧರ ಪೈ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಪೂಜಾರಿ, ಅರುಣ್ ಶೆಟ್ಟಿ ಪಾದೂರು, ಗಂಗಾಧರ ಸುವರ್ಣ, ಇಂದಿರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News