ಮಂಗಳೂರು: ಸಮಗ್ರ ತನಿಖೆಗೆ ಒತ್ತಾಯಿಸಿ ಸಿಪಿಎಂನಿಂದ ನಗರಪಾಲಿಕೆ ಚಲೊ

Update: 2018-02-20 15:20 GMT

ಮಂಗಳೂರು, ಫೆ. 20: ಕುಡ್ಸೆಂಪ್ (ಒಳಚರಂಡಿ) ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಉನ್ನತ ತನಿಖೆಗೆ ಒತ್ತಾಯಿಸಿ, ಅಮೃತ್ ಯೋಜನೆಯಿಂದ ಭ್ರಷ್ಟ ಗುತ್ತಿಗೆದಾರರನ್ನು ಹೊರಗಿಡಲು ಆಗ್ರಹಿಸಿ ಸಿಪಿಎಂ ನೇತೃತ್ವದಲ್ಲಿ ನಗರದಲ್ಲಿ ಇಂದು (ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಬಲ್ಲಾಳ್‌ಬಾಗ್‌ನಿಂದ ಮೆರವಣಿಗೆಯಲ್ಲಿ ಹೊರಟ ಪಕ್ಷದ ಕಾರ್ಯಕರ್ತರು, ಶಾಸಕರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರು, ವಿದೇಶೀ ಬ್ಯಾಂಕ್ ಸಾಲದಿಂದ ರೂಪಿಸಿದ ಅಭಿವೃದ್ಧಿ ಯೋಜನೆಗಳು ಮಂಗಳೂರಿನ ನಾಗರಿಕರ ಪಾಲಿಗೆ ಯಮಪಾಶವಾಗುತ್ತಿದೆ. ಒಂದೆಡೆ ಎ.ಡಿ.ಬಿ. ಷರತ್ತಿನಂತೆ ತೆರಿಗೆಗಳು ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಎ.ಡಿ.ಬಿ. ಒಳಚರಂಡಿ ಕಾಮಗಾರಿಗಳಲ್ಲಿ ಅಪಾರ ಭ್ರಷ್ಟಾಚಾರ ನಡೆಸಲಾಗಿದೆ. ಭ್ರಷ್ಟಾಚಾರದಿಂದಾಗಿ ಒಳಚರಂಡಿ ವ್ಯವಸ್ಥೆ ಬಳಕೆಗೆ ಅಯೋಗ್ಯವಾದರೆ ಎ.ಡಿ.ಬಿ. ಸಾಲದ ಕಂತು ಕಟ್ಟಲು ಜನರ ತಲೆಯ ಮೇಲೆ ಹೊಸ ತೆರಿಗೆಗಳನ್ನು ಏರಿಸಲಾಗುತ್ತಿದೆ. ಕುಡ್ಸೆಂಪ್ ಹಗರಣ ಮಂಗಳೂರು ಕಂಡ ಅತ್ಯಂತ ದೊಡ್ಡ ಹಗರಣದಲ್ಲಿ ನಗರದ ಶಾಸಕರಾದ ಮೊಯ್ದಿನ್ ಬಾವ ಹಾಗೂ ಜೆ.ಆರ್. ಲೋಬೋರವರು ಶಾಮೀಲಾಗದೆ ನಡೆಯಲು ಅಸಾಧ್ಯ. 2002ರಲ್ಲಿ ಎ.ಡಿ.ಬಿ. ಯೋಜನೆ ಮಂಗಳೂರಿಗೆ ಬಂದಾಗ ಲೋಬೋರವರು ಪಾಲಿಕೆಯ ಕಮಿಷನರ್ ಆಗಿದ್ದರು. ನಂತರ ಕುಡ್ಸೆಂಪ್ ಯೋಜನಾ ನಿರ್ದೇಶಕರಾಗಿ ಜವಾಬ್ದಾರಿ ಹೊತ್ತಿದ್ದರು. ಲೋಬೋ ಹುದ್ದೆಗೆ ರಾಜೀನಾಮೆ ನೀಡಿ ಶಾಸಕರಾಗುವುದರ ಹಿಂದೆ ವಿದೇಶಿ ಬ್ಯಾಂಕ್ ಎ.ಡಿ.ಬಿ.ಯ ಲಾಬಿ ಇದೆ ಎಂದು ಆರೋಪಿಸಿದರು.

ಸಿಪಿಎಂ ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್‌ರವರು ಮಾತನಾಡಿ, ಮೊದಲ ಹಂತದ 350 ರೂಪಾಯಿ ಕೋಟಿ ಹಣವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿದ ಕುಡ್ಸೆಂಪ್ ಅಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಗಳು ಮತ್ತೆ 2ನೇ ಹಂತದ 410 ಕೋಟಿ ಹಣವನ್ನು ತಂದು ಭ್ರಷ್ಟಾಚಾರವನ್ನು ನಡೆಸಲು ಮುಂದಾಗಿದ್ದಾರೆ ಎಂದು ದೂರಿದರು.

ನಗರಪಾಲಿಕಾ ಸದಸ್ಯರಾದ ದಯಾನಂದ ಶೆಟ್ಟಿ ಮಾತನಾಡಿದರು. ಹೋರಾಟದ ನೇತೃತ್ವವನ್ನು ಸಿಪಿಎಂ ನಾಯಕರಾದ ಸಂತೋಷ್ ಬಜಾಲ್, ಜಯಂತಿ ಬಿ. ಶೆಟ್ಟಿ, ಬಿ.ಕೆ. ಇಮಿತಿಯಾಜ್, ಸಂತೋಷ್ ಶಕ್ತಿನಗರ, ನವೀನ್ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಸುರೇಶ್ ಬಜಾಲ್, ದಿನೇಶ್ ಶೆಟ್ಟಿ, ಬಾಬು ದೇವಾಡಿಗ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News