ರಾಷ್ಟ್ರೀಯ ಮೀನುಗಾರಿಕಾ ನೀತಿಗಾಗಿ ಸಮಿತಿ: ಅಮಿತ್ ಶಾ

Update: 2018-02-20 15:47 GMT

ಮಲ್ಪೆ, ಫೆ. 20: ಇಡೀ ದೇಶಕ್ಕೆ ಅನ್ವಯಿಸುವಂತೆ ರಾಷ್ಟ್ರೀಯ ಮೀನುಗಾರಿಕಾ ನೀತಿಗಾಗಿ ಅಯ್ಯಪ್ಪನ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿ ಮೀನುಗಾರರ ಕಲ್ಯಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಶಿಫಾರಸ್ಸು ಮಾಡಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಮಲ್ಪೆಯ ಕಡಲು ಕಿನಾರೆಯಲ್ಲಿ ಇಂದು ಸಂಜೆ ಬಿಜೆಪಿ ಕರ್ನಾಟಕದ ವತಿಯಿಂದ ಆಯೋಜಿಸಲಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ಸುಮಾರು 20 ನಿಮಿಷಗಳ ತನ್ನ ಭಾಷಣದುದ್ದಕ್ಕೂ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ದೇಶದ ಮಹಾ ಭ್ರಷ್ಟ ಸರಕಾರವೆಂದು ಬಣ್ಣಿಸಿದ ಅಮಿತ್ ಶಾ, ನರೇಂದ್ರ ಮೋದಿ ಸರಕಾರ ಮೀನುಗಾರ ಸಮುದಾಯಕ್ಕೆ ನೀಡುತ್ತಿರುವ ಯೋಜನೆಗಳ ಉದ್ದನೆಯ ಪಟ್ಟಿಯೊಂದಿಗೆ, ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದೆಂದು ಅವರು ನಂಬಿರುವ ಬಿ. ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮೀನುಗಾರರಿಗೆ ಕೈಗೊಳ್ಳುವ ಕಲ್ಯಾಣ ಕಾರ್ಯಕ್ರಮಗಳ ಬಣ್ಣ ಬಣ್ಣದ ಚಿತ್ರಣವನ್ನು ಬಿಡಿಸಿಟ್ಟರು.

ಇಂದು ತಾನು ಸುಬ್ರಹ್ಮಣ್ಯದಿಂದ ಆರಂಭಿಸಿ, ಈಗ ಮಲ್ಪೆಯವರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಎಲ್ಲಾ ಕಡೆಗಳಲ್ಲೂ ಜನರು ಸಿದ್ದರಾಮಯ್ಯ ಸರಕಾರವನ್ನು ಒದ್ದೊಡಿಸುವ ಸಂಕಲ್ಪ ಮಾಡಿರುವುದನ್ನು ಕಂಡಿರುವುದಾಗಿ ಹೇಳಿದರು. ಇಲ್ಲಿ ಸೇರಿರುವ ಜನಸಾಗರ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ನಾವು ಆಡಳಿತಕ್ಕೆ ಬರುವುದು ಖಚಿತವೆಂದು ಸಾರುತ್ತಿದೆ ಎಂದರು. 

ಕಳೆದ ಐದು ವರ್ಷಗಳ ಸಿದ್ದರಾಮಯ್ಯ ಸರಕಾರ ಅತ್ಯಂತ ಭ್ರಷ್ಟವಾಗಿದ್ದು, ಅದು ದೇಶದ ಹೆಸರನ್ನು ಹಾಳು ಮಾಡಿದೆ. ಭ್ರಷ್ಟಾಚಾರದ ವಿಷಯದಲ್ಲಿ ಈ ಸರಕಾರಕ್ಕೆ ಯಾವುದೇ ನಾಚಿಕೆಯೂ ಇಲ್ಲದಂತಾಗಿದೆ. ಸಿದ್ದು ಸರಕಾರದ ಪ್ರತಿ ಸದಸ್ಯರು ಭ್ರಷ್ಟಾಚಾರವನ್ನು ‘ಪದಕ’ದಂತೆ ಹೆಮ್ಮೆಯಿಂದ ಧರಿಸಿಕೊಂಡಿದೆ. ಇವರಿಗೆ ಬಡವರು, ಮೀನುಗಾರರ ಕುರಿತಂತೆ ಯಾವುದೇ ಕಾಳಜಿ ಇಲ್ಲವಾಗಿದೆ ಎಂದವರು ದೂರಿದರು.

ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ದೇಶವನ್ನು ವಿಕಾಸದತ್ತ ಕೊಂಡೊಯ್ಯುತ್ತಿದೆ. ಕರ್ನಾಟಕವೂ 17 ಮಂದಿ ಸಂಸದರನ್ನು ಗೆಲ್ಲಿಸಿ ಕೊಟ್ಟು ಇದಕ್ಕೆ ಉತ್ತೇಜನ ನೀಡಿದೆ. ಮೋದಿ ಸರಕಾರ ಮೀನುಗಾರರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ‘ನೀಲಿ ಕ್ರಾಂತಿ’ ಅವರ ಕನಸಾಗಿದ್ದು, ಇದಕ್ಕಾಗಿ ಅವರು ಪ್ರಕಟಿಸಿದ ಯೋಜನೆಗಳಿಗೆಲ್ಲಾ ರಾಜ್ಯದ ಸಿದ್ದರಾಮಯ್ಯ ಸರಕಾರ ತಡೆಯೊಡ್ಡುತ್ತಿದೆ ಎಂದವರು ಆರೋಪಿಸಿದರು.

ಕೇಂದ್ರ ಸರಕಾರದ ಯೋಜನೆಗಳ ಲಾಭ ಜನಸಾಮಾನ್ಯರಿಗೆ ತಲುಪದಂತೆ ಈ ಸರಕಾರ ನೋಡಿಕೊಂಡಿದೆ. ಇನ್ನು ಎಷ್ಟು ದಿನ ಇದನ್ನು ತಡೆಯಬಲ್ಲರು ಎಂದ ಅಮಿತ್ ಶಾ, ಇಂಥ ಸರಕಾರವನ್ನು ಮತ್ತೆ ಅಧಿಕಾರಕ್ಕೆ ಬರಲು ನೀವು ಅವಕಾಶ ನೀಡಬಾರದು ಎಂದರು. ಕಾಂಗ್ರೆಸ್ ಸರಕಾರ 60 ವರ್ಷಗಳ ಆಡಳಿತದಲ್ಲಿ ಮಾಡಲಾಗದ ಅಭಿವೃದ್ಧಿಯನ್ನು ಮೋದಿ ಸರಕಾರ ನಾಲ್ಕೇ ವರ್ಷಗಳ ಆಡಳಿತದಲ್ಲಿ ಮಾಡಿದೆ ಎಂದವರು ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ಬಡವರ ಆರೋಗ್ಯ ಸುರಕ್ಷತೆಗಾಗಿ 10 ಕೋಟಿ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಜಾರಿಗೊಳಿಸಿದೆ. ಅದೇ ರೀತಿ ಉಚಿತ ಅಡುಗೆ ಗ್ಯಾಸ್ ಸಿಲಿಂಡರ್‌ನ್ನು ಎಂಟು ಕೋಟಿ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ ಎಂದರು.

ನೀಲಿ ಕ್ರಾಂತಿ: ಮೋದಿ ಸರಕಾರ ಪ್ರಕಟಿಸಿದ ನೀಲಿಕ್ರಾಂತಿಯಲ್ಲಿ ಕೃಷಿಕರಿಗೆ ನೀಡುವ ಕಿಶಾನ್ ಕಾರ್ಡ್‌ನಂತೆ ಮೀನುಗಾರರಿಗೂ ಕಾರ್ಡ್ ನೀಡಲಾಗುವುದು. ಇದರಲ್ಲಿ 15,000 ರೂ.ಗಳು ಅವರ ಬ್ಯಾಂಕ್ ಖಾತೆಯಲ್ಲಿ ಇರುತ್ತದೆ. ಅದನ್ನು ಅಗತ್ಯಕ್ಕೆ ಬಳಸಿಕೊಳ್ಳಬಹುದು ಎಂದರು. ಅಲ್ಲದೇ ಅವರಿಗೆ 20 ರೂ. ಪ್ರೀಮಿಯಂಗೆ ಎರಡು ಲಕ್ಷ ರೂ. ಸಿಗಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತಾನು ಅಧಿಕಾರಕ್ಕೆ ಬಂದ ತಿಂಗಳೊಳಗೆ ಮೀನುಗಾರರಿಗೆ ಮನೆಯ ಹಕ್ಕುಪತ್ರ ನೀಡುವುದಾಗಿ ಪ್ರಕಟಿಸಿದರಲ್ಲದೇ, ನೀವು ನೀಡುವ ಎಲ್ಲಾ ಬೇಡಿಕೆಗಳನ್ನು ಮೂರು ತಿಂಗಳೊಳಗೆ ಈಡೇರಿಸುವುದಾಗಿ ಭರವಸೆ ನೀಡಿದರು. ಸಾಗರಮಾಲಾ ಯೋಜನೆಯಲ್ಲಿ ರಾಜ್ಯದ ಎಲ್ಲಾ ಬಂದರುಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಜೋಡಿಸುವ ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿ ತಿಳಿಸಿದರು.

ಕರಾವಳಿಯ ಮೀನುಗಾರರ ವತಿಯಿಂದ ಅಮಿತ್ ಶಾರಿಗೆ ಯಕ್ಷಗಾನದ ಕೇದಗೆ ಮುಂದಲೆ ತೊಡಿಸಿ, ಬೆಳ್ಳಿಯ ಬಂಗುಡೆ ಮೀನಿನ ಪ್ರತಿಕೃತಿಯನ್ನು ಅರ್ಪಿಸಿ ಸನ್ಮಾನಿಸಲಾಯಿತು. ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅರ್ಪಿಸಲಾಯಿತು.

ಸಮಾರಂಭದಲ್ಲಿ ಬಿಜೆಪಿಯ ನಾಯಕರುಗಳಾದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್, ಸಿ.ಟಿ.ರವಿ, ನಳಿನ್‌ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಭಾರತಿ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಟ್ಟಾರು ರತ್ನಾಕರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ರಾಮಚಂದ್ರ ಬೈಕಂಪಾಡಿ, ರಘುಪತಿ ಭಟ್, ಯಶ್ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಬಿ.ಎಂ. ಸುಕುಮಾರ್ ಶೆಟ್ಟಿ, ದಿನಕರ ಬಾಬು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News