ಮುಸ್ಲಿಂ ಅಭ್ಯರ್ಥಿಗೆ ಇಲ್ಲವೇ ಪ್ರಭಲ ಜಾತ್ಯಾತೀತ ಅಭ್ಯರ್ಥಿಗೆ ಟಿಕೇಟ್‌ಗೆ ಮನವಿ ಮಾಡಲು ನಿರ್ಧಾರ

Update: 2018-02-20 18:01 GMT

ಪುತ್ತೂರು, ಫೆ. 20: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಅಥವಾ ಜಾತ್ಯಾತೀತ ನಿಲುವಿನ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವಂತೆ ಪಕ್ಷದ ಪ್ರಮುಖರಿಗೆ ಮನವಿ ಮಾಡುವುದೆಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ಸಭೆಯು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಸಂಜೆ ನಡೆದು ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಹಲವು ಮುಸ್ಲಿಂ ಮುಖಂಡರು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು. ಪರೋಕ್ಷವಾಗಿ ಹೇಮನಾಥ ಶೆರಟ್ಟಿವರಿಗೆ ಅವಕಾಶ ಕೊಡಬೇಕೆಂಬ ಆಗ್ರಹ ಸಭೆಯಲ್ಲಿ ಹಲವರಿಂದ ವ್ಯಕ್ತವಾಯಿತು. ಪುತ್ತೂರಿನಲ್ಲಿ ಈ ಬಾರಿ ಓರ್ವ ಮುಸ್ಲಿಂ ಅಭ್ಯರ್ಥಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಕೊಡಬೇಕು, ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಮರಿಗೆ ಅವಕಾಶ ಕೊಟ್ಟಿದೆ ಎಂಬ ಕಾರಣಕ್ಕೆ ಪುತ್ತೂರಿನಲ್ಲಿ ಅವಕಾಶ ಕೊಡಲು ಒಂದು ವೇಳೆ ನಿರಾಕರಿಸುವುದಾದರೆ ಪ್ರಬಲ ಜಾತ್ಯಾತೀತ ತತ್ವ ಸಿದ್ಧಾಂತವಿರುವ ವ್ಯಕ್ತಿಗಳಿಗೆ ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ಇನ್ನೊಮ್ಮೆ ಎಲ್ಲ ಮುಸ್ಲಿಂ ಮುಖಂಡರನ್ನು ಸೇರಿಸಿಕೊಂಡು ಸಭೆ ನಡೆಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಗೆ, ರಾಜ್ಯ ಉಸ್ತುವಾರಿ ವೇಣುಗೋಪಾಲ್‌ರವರಿಗೆ, ಕೆಪಿಸಿಸಿ ಅಧ್ಯಕ್ಷರ ಬಳಿಗೆ ಹಾಜಿ ಮುಸ್ತಫಾ ಕೆಂಪಿಯವರ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.

ಉಪ್ಪಿನಂಗಡಿ ಮಾಲಿಕುದಿನಾರ್ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಮಾತನಾಡಿ ಪುತ್ತೂರು ಕ್ಷೇತ್ರದಲ್ಲಿ 40 ಸಾವಿರ ಮುಸ್ಲಿಂ ಮತಗಳಿವೆ, ಒಂದು ಬಾರಿಯಾದರೂ ಮುಸ್ಲಿಂ ಅಭ್ಯರ್ಥಿಗೆ ಇಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕಿದೆ ಎಂದರು. ಶಾಸಕರು ಅನುದಾನ ತಂದಿರಬಹುದು, ಅದು ಶಾಸಕರಾದವರ ಕರ್ತವ್ಯ ಕೂಡಾ, ಸಮುದಾಯದ ಪರ ಕಾಳಜಿ ವಹಿಸುವವರು, ಅನ್ಯಾಯವಾದಾಗ ಸಹಾಯಕ್ಕೆ ಬರುವವರ ಅಗತ್ಯ ಇಲ್ಲಿ ಎದ್ದು ಕಾಣುತ್ತಿದೆ, ನಾವು ಎಸ್‌ಡಿಪಿಐ ಜೊತೆಯಾಗಲೀ, ಜೆಡಿಎಸ್ ಜೊತೆಯಾಗಲೀ ಹೋಗುದಿಲ್ಲ, ನಾವು ತಾತನ ಕಾಲದಿಂದಲೂ ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್ ಎಂದ ಅವರು ಒಂದೋ ಇಲ್ಲಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಕೊಡಬೇಕು ಇಲ್ಲವೇ ಶುದ್ಧ ಜಾತ್ಯಾತೀತ ಮನಸ್ಸಿನ ಓರ್ವ ವ್ಯಕ್ತಿಗೆ ಅವಕಾಶ ಕೊಡಬೇಕು ಎಂದು ಹೇಳಿದರು.

ಬಶೀರ್ ಬೂಡಿಯಾರ್ ಮಾತನಾಡಿ ಈಗಿನ ಶಾಸಕರಿಗೆ ನಮ್ಮ ಬಗ್ಗೆ ಕಾಳಜಿಯಿಲ್ಲ, ನಮ್ಮ ಬೇಡಿಕೆಗೆ ಸ್ಪಂದನೆಯಿಲ್ಲ, ಈ ಬಾರಿಯೂ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾದರೆ ನಾನು ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ, ಹೇಮನಾಥ ಶೆಟ್ಟಿ ನಿಂತರೆ ನಾನು ಅವರಿಗೆ ಬೆಂಬಲಿಸುತ್ತೇನೆ ಎಂದು ಹೇಳಿದರು.

ನಗರಸಭೆ ಸದಸ್ಯ ಎಚ್ ಮುಹಮ್ಮದಾಲಿ ಮಾತನಾಡಿ ತಾಲೂಕಿನ ಹಲವು ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ, ನಗರಸಭೆಯೂ ಕಾಂಗ್ರೆಸ್ ಬೆಂಬಲಿತರ ಆಡಳಿತದಲ್ಲಿದೆ ಆದರೂ ಹಲವರಿಗೆ ಅಸಮಾಧಾನವಿದೆ, ಎಂದರು. ಹಿಂದಿನ ಬಾರಿ ನಾವೆಲ್ಲಾ ಸೇರಿ ಶಕುಂತಳಾ ಶೆಟ್ಟಿಯವರನ್ನು ಗೆಲ್ಲಿಸಿದೆವು, ಮಾತ್ರವಲ್ಲ ಪುತ್ತೂರಲ್ಲಿ ಕಾಂಗ್ರೆಸ್ ಲೀಡ್ ಪಡೆದಿತ್ತು ಆದರೂ ಏಕಾಏಕಿ ಹೇಮನಾಥ ಶೆಟ್ಟಿಯವರನ್ನು ಬ್ಲಾಕ್ ಅಧ್ಯಕ್ಷತೆಯಿಂದ ತೆಗೆಯಲಾಯಿತು ಎಂದರು.

ಇಂದು ಮುಸ್ಲಿಂ ಯುವಕರು ಎಸ್.ಡಿ.ಪಿ.ಐ.ಯತ್ತ ಹೋಗುತ್ತಿದ್ದು ಹಿಂದೂ ಯುವಕರು ಬಜರಂಗದಳ, ಬಿಜೆಪಿಯತ್ತ ಹೋಗುತ್ತಿದ್ದಾರೆ ಹಾಗಾಗಿ ನಾವು ಗಂಭೀರ ಚಿಂತನೆ ನಡೆಸಬೇಕಿದ್ದು ನೈಜ ಜಾತ್ಯಾತೀತವಾದಿಗೆ ಈ ಬಾರಿ ಪುತ್ತೂರಲ್ಲಿ ಅವಕಾಶ ಕೊಡಬೇಕಿದೆ, ಹೇಮನಾಥ ಶೆಟ್ಟಿಗೆ ಅವಕಾಶ ಕೊಡಬೇಕೆಂಬುವುದು ತಾಲೂಕಿನ ಬಹುತೇಕರ ಬೇಡಿಕೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಅಯೂಬ್ ಮಾತನಾಡಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಮರು ಅಗತ್ಯ, ಆದರೆ ನಂತರ ಗೆಲ್ಲಿಸಿದವರ ನೆನಪಿಲ್ಲ, ಇಲ್ಲಿನ ಕಾಂಗ್ರೆಸ್‌ಗೆ ಕೆ.ಪಿ ಅಬ್ದುಲ್ಲರ ಕೊಡುಗೆ ಅಪಾರ, ಅದೇ ಅಬ್ದುಲ್ಲ ಪುತ್ರ ಫಝಲ್ ರಹೀಂರನ್ನು ಏಕಾಏಕಿ ಬ್ಲಾಕ್ ಅಧ್ಯಕ್ಷತೆಯಿಂದ ಕಾರಣವಿಲ್ಲದೇ ತೆಗೆದು ಹಾಕಲಾಯಿತು, ಕಾಂಗ್ರೆಸ್‌ಗೆ ಬಹುಕಾಲದಿಂದ ದುಡಿಯುತ್ತಿರುವ ಹೇಮನಾಥ ಶೆಟ್ಟಿಯವರನ್ನು ತುಳಿಯಲಾಯಿತು. ಈಗ ಮಹಮ್ಮದ್ ಬಡಗನ್ನೂರು ಅಧ್ಯಕ್ಷರಾಗಿದ್ದು ಅವರನ್ನು ಯಾವಾಗ ತೆಗೆದು ಹಾಕುತ್ತಾರೋ ಗೊತ್ತಿಲ್ಲ, ಮುಸ್ಲಿಮರೆಂದರೆ ಅಷ್ಟೂ ತಾತ್ಸಾರ ಎಂದ ಅವರು ಯಾವುದೇ ಸಮಿತಿಯಲ್ಲಿ ಇಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಆರೋಪಿಸಿದರು.

ಶಕೂರ್ ಹಾಜಿ ಕಲ್ಲೇಗ, ಎಪಿಎಂಸಿ ಸದಸ್ಯ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಎಂ.ಕೆ ಮೂಸಾ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಫಝಲ್ ರಹೀಂ, ಉಪ್ಪಿನಂಗಡಿ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ರಹಿಮಾನ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಯು.ಟಿ ತೌಸೀಫ್, ಕಾಂಗ್ರೆಸ್ ಕಿಸಾನ್ ಘಟಕದ ಮುಖಂಡ ಅಬ್ದುಲ್ ಖಾದರ್ ಮೇರ್ಲ, ಎಲ್.ಟಿ ರಝಾಕ್ ಹಾಜಿ, ಮೋನು ಬಪ್ಪಳಿಗೆ, ಅಬೂಬಕ್ಕರ್ ಮುಲಾರ್, ಯೂಸುಫ್ ಮಾಡನ್ನೂರು, ಇಸ್ಮಾಯಿಲ್ ಸಾಲ್ಮರ ಮತ್ತಿತರರು ಮಾತನಾಡಿ ಪುತ್ತೂರಿಗೆ ಅಭ್ಯರ್ಥಿಯ ಆಯ್ಕೆಯೇ ಆಗಿಲ್ಲ ಏನಿದ್ದರೂ ನಾವು ಮುಂದೆಯೂ ಕಾಂಗ್ರಸನ್ನೇ ಬೆಂಬಲಿಸಬೇಕು, ಸಿದ್ದರಾಮಯರವರು ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ ಹಾಗಾಗಿ ಪುತ್ತೂರಿನಲ್ಲಿ ಜಾತ್ಯಾತೀತ ತತ್ವ ಸಿದ್ದಾಂತದವರನ್ನು ನಾವು ಬೆಂಬಲಿಸಬೇಕು ಎಂದರು.

ಸಭೆಯಲ್ಲಿ ನಗರಸಭೆ ಸದಸ್ಯ ಅನ್ವರ್ ಖಾಸಿಂ, ಕೆಪಿಸಿಸಿ ಅಲ್ಪಸಂಖ್ಯಾತ ಸಂಯೋಜಕ ಸಾಬು ಸಾಹೇಬ್ ಪಾಲ್ತಾಡ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ಯು.ಕೆ ಇಬ್ರಾಹಿಂ, ಮೂಸಕುಂಞಿ ಹಾಜಿ ಬಂಗಾರಡ್ಕ, ಸಾದಿಕ್ ಹಾಜಿ ಕೂರ್ನಡ್ಕ, ಶಾಹುಲ್ ಹಮೀದ್ ಜಾಲಗದ್ದೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶಬ್ಬೀರ್ ಕೆಂಪಿ, ಅಬ್ದುಲ್ ಖಾದರ್ ಹಾಜಿ ಈಶ್ವರಮಂಗಲ, ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶರೀಫ್ ಸಾಲ್ಮರ, ಇಬ್ರಾಹಿಂ ಮುಲಾರ್, ಹಮೀದ್ ಕರಾವಳಿ ಉಪ್ಪಿನಂಗಡಿ, ಜಮಾಲ್ ಹಾಜಿ ಮುಕ್ವೆ, ಅಬ್ಬು ಬೆದ್ರಾಳ, ಜಾಕಿರ್ ಹುಸೇನ್ ಬಪ್ಪಳಿಗೆ, ಅಶ್ರಫ್ ಪುರುಷರಕಟ್ಟೆ, ಬಶೀರ್ ಪರ್ಲಡ್ಕ, ಹನೀಫ್ ಪುಣ್ಚತ್ತಾರು, ಹಾಜಿ ಅಬ್ದುಲ್ ಅಝೀರ್ ಸಾಮೆತ್ತಡ್ಕ, ಹನೀಫ್ ಪೆರ್ನೆ, ಇಕ್ಬಾಲ್ ಕರ್ವೇಲ್, ಮುಹಮ್ಮದ್ ಕೂಟೇಲು, ಹಂಝತ್ ಸಾಲ್ಮರ, ಉಮ್ಮರ್ ಕರಾವಳಿ, ಮುಹಮ್ಮದ್ ಸಾಹೇಬ್ ಕೂರ್ನಡ್ಕ, ಸಿದ್ದಿಕ್ ಗೋಳಿಕಟ್ಟೆ, ಎಪಿಜೆ ಅಬ್ದುಲ್ ರಝಾಕ್, ಕೆ.ಎಂ ಹನೀಫ್ ರೆಂಜಲಾಡಿ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮತ್ತಿತರ ನೂರಾರು ಮಂದಿ ಉಪಸ್ಥಿತರಿದ್ದರು. ಹನೀಫ್ ಬಗ್ಗಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News