ಕಸ್ಬ ಬೆಂಗ್ರೆ: ಮೀನುಗಾರರ ಸಮಾವೇಶದಿಂದ ಹಿಂದಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತರಿಂದ ಬಾಲಕರಿಗೆ ಹಲ್ಲೆ; ಆರೋಪ

Update: 2018-02-21 05:59 GMT

ಮಂಗಳೂರು, ಫೆ. 21: ಮಲ್ಪೆಯಲ್ಲಿ ಮಂಗಳವಾರ ಸಂಜೆ ನಡೆದ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಬಸ್ ನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕಸ್ಬ ಬೆಂಗ್ರೆಯ ಇಬ್ಬರು ಬಾಲಕರಿಗೆ ಹಲ್ಲೆ ನಡೆಸಿ, ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. 

ಗಾಯಾಳುಗಳನ್ನು ಅಮಿನ್ (16) ಮತ್ತು ಸಫ್ವಾನ್ (16) ಎಂದು ಗುರುತಿಸಲಾಗಿದೆ. 

ಮಲ್ಪೆಯಲ್ಲಿ ಮಂಗಳವಾರ ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಮೀನುಗಾರರ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕಸ್ಬ ಬೆಂಗ್ರೆಯಿಂದ 5 ಬಸ್ ಗಳು ಹೋಗಿದ್ದವು ಎನ್ನಲಾಗಿದೆ. ಕಾರ್ಯಕ್ರಮ ಮುಗಿಸಿ ವಾಪಸ್ ಹಿಂದಿರುಗುತ್ತಿದ್ದಾಗ ಒಂದು ಬಸ್ ನಲ್ಲಿದ್ದವರು ಕಸ್ಬ ಬೆಂಗ್ರೆ ಸಮೀಪ 'ಜೈ ಶ್ರೀರಾಮ್' ಘೋಷಣೆ ಕೂಗಿದ್ದು, ಇದನ್ನು ಸ್ಥಳೀಯರು ವಿರೋಧಿಸಿದ್ದರು. ಇದು ಬಿಜೆಪಿ ಕಾರ್ಯಕರ್ತರಿಗೆ ಹಾಗು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಲು ಕಾರಣವಾಯಿತು ಎಂದು ತಿಳಿದುಬಂದಿದೆ. ಉದ್ರಿಕ್ತರಾದ ಬಿಜೆಪಿ ಕಾರ್ಯಕರ್ತರು ರಸ್ತೆ ಬದಿ ಇರುವ ಮನೆಗಳಿಗೆ ಕಲ್ಲೆಸೆತ ಹಾಗು ದಾಂಧಲೆಗೆ ಇಳಿದರು ಎನ್ನಲಾಗಿದ್ದು, ಅಮಿನ್ ಹಾಗು ಸಫ್ವಾನ್ ರಿಗೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News