ಮತ್ತೊಮ್ಮೆ ಒಬ್ಬರೇ ಬಾರದೆ ‘ಕಮಲ’ದೊಂದಿಗೆ ಬನ್ನಿ: ಅಮಿತ್ ಶಾಗೆ ಪರ್ಯಾಯ ಪಲಿಮಾರು ಶ್ರೀ ಶುಭಹಾರೈಕೆ

Update: 2018-02-21 06:36 GMT

ಉಡುಪಿ, ಫೆ. 21: ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಜಾಗದಲ್ಲಿರುವ ಪಲಿಮಾರು ಮಠದ ವಸತಿ ಸಂಕೀರ್ಣ ಕಟ್ಟಡ ಶ್ರೀರಾಮಧಾಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ಉದ್ಘಾಟಿಸಿದರು. 

ನಂತರ ಕೃಷ್ಣಮಠಕ್ಕೆ ಆಗಮಿಸಿದ ಅಮಿತ್ ಶಾ, ಶ್ರೀಕೃಷ್ಣ ದೇವರ ದರ್ಶನ ಪಡೆದರು. ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಂದ ಅನು ಗ್ರಹ ಮಂತ್ರಾಕ್ಷತೆ ಪಡೆದ ಅವರು ಕನಕ ಕಿಂಡಿ ಮೂಲಕ ದೇವರ ದರ್ಶನ ಮಾಡಿದರು.

ಈ ಸಂದರ್ಭ ಮಾತನಾಡಿದ ಅಮಿತ್ ಶಾ, ಶ್ರೀಕೃಷ್ಣನ ದರ್ಶನ ಮತ್ತು ಸ್ವಾಮೀಜಿಯ ಆಶೀರ್ವಾದ ಪಡೆದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ನಿನ್ನೆ ಎಲ್ಲ ಸಂತ ರೊಂದಿಗೆ ಸಂವಾದ ನಡೆಸುವ ಅವಕಾಶ ನನಗೆ ಲಭಿಸಿದೆ. ಇದರಿಂದ ತುಂಬಾ ಸಂತೋಷ ಆಗಿದೆ ಎಂದು ಹೇಳಿದರು.

ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿ, ‘ಮುಂದೆ ನೀವು ಇಲ್ಲಿಗೆ ಬರುವಾಗ ಒಬ್ಬರೆ ಬಾರದೆ ಕಮಲದೊಂದಿಗೆ ಬರಬೇಕು. ಅದನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಬೇಕು. ಹೀಗೆ ಎಲ್ಲ ಜನರ ಹೃದಯದಲ್ಲೂ ಕಮಲ ಅರಳುವಂತಾಗಬೇಕು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಕಮಲ ಅರಳಬೇಕು. ನಿಮಗೆ ದೇವರ ಅನುಗ್ರಹ ಸಿಗಲಿ. ಅದಕ್ಕಾಗಿ ನಾವು ಪ್ರಾರ್ಥನೆ ಮಾಡುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಗತ್ಯ. ಆ ನಿಮ್ಮ ಸಂಕಲ್ಪ ನೆರವೇರಲಿ ಎಂದು ಹಾರೈಸಿದರು.

ಕರ್ನಾಟಕ ಹನುಮಂತನ ಧರ್ಮ ಭೂಮಿ ಮತ್ತು ಶಬರಿ ಕರ್ನಾಟಕದ ಪರಮ ಭಕ್ತೆ. ಹಾಗಾಗಿ ಶ್ರೀರಾಮ ಕರ್ನಾಟಕಕ್ಕೆ ಬಂದರು. ಈ ಎಲ್ಲ ಕಾರಣ ದಿಂದ ಉಡುಪಿ ಪವಿತ್ರ ಭೂಮಿ. ಉಡುಪಿ ಹಾಗೂ ಗುಜರಾತಿಗೆ ಅವಿನಾಭಾವ ಸಂಬಂಧ ಇದೆ. ಹನುಮಂತನ ಆವತಾರ ಆಗಿರುವ ಜಗದ್ಗುರು ಮಧ್ವಾ ಚಾರ್ಯರ ಭಕ್ತಿಗೆ ಒಲಿದ ಶ್ರೀಕೃಷ್ಣ ಗುಜರಾತಿನ ದ್ವಾರಕೆಯಿಂದ ಉಡುಪಿಗೆ ಬಂದಿದ್ದಾನೆ ಎಂದು ಸ್ವಾಮೀಜಿ ತಿಳಿಸಿದರು.

ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಶಾಸಕರಾದ ಸಿ.ಟಿ.ರವಿ, ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್, ಮುಖಂಡರಾದ ಬಿ.ಎಲ್. ಸಂತೋಷ್, ಮಟ್ಟಾರು ರತ್ನಾಕರ ಹೆಗ್ಡೆ, ಸಂಜೀವ ಮಠಂದೂರು, ಶ್ರೀಶ ಕಡೆಕಾರ್, ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News