ಫೆ. 24: ಪುತ್ತೂರಿನಲ್ಲಿ ಸಿಎಫ್‌ಐ ವಿದ್ಯಾರ್ಥಿ ಹೋರಾಟ ಸಮಾವೇಶ

Update: 2018-02-21 10:54 GMT

ಪುತ್ತೂರು, ಫೆ. 21: ವಿದ್ಯಾರ್ಥಿಗಳು ಹಾಗೂ ಯುವಕರನ್ನು ಗುರಿಯಾಗಿರಿಸಿ ನಡೆಯುತ್ತಿರುವ ದಬ್ಬಾಳಿಕೆ, ಹಲ್ಲೆ, ಅನೈತಿಕ ಪೊಲೀಸ್‌ಗಿರಿ, ಸಾಂಸ್ಥಿಕ ದಬ್ಬಾಳಿಕೆ, ಬೆದರಿಕೆ ಇನ್ನಿತರ ಘಟನೆಗಳನ್ನು ವಿರೋಧಿಸಿ ಪುತ್ತೂರಿನಲ್ಲಿ ಫೆ. 24ರಂದು ಮದ್ಯಾಹ್ನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ವತಿಯಿಂದ ವಿದ್ಯಾರ್ಥಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ದ.ಕ. ಜಿಲ್ಲಾಧ್ಯಕ್ಷ ಮಹಮ್ಮದ್ ಇಮ್ರಾನ್ ತಿಳಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಕ್ಷತಾ ಕೊಲೆ ಆರೋಪಿ ಮದನ್ ಪತ್ತೆ, ಸೌಜನ್ಯ ಕೊಲೆ ಬಳಿಕದ ವಿದ್ಯಾಮಾನ, ಕಾವ್ಯಾ ಪೂಜಾರಿ ಆತ್ಮಹತ್ಯೆ ಪ್ರೇರಣೆ, ಧಾನೇಶ್ವರಿ ಆತ್ಮಹತ್ಯೆ ಪ್ರಕರಣ, ಪಿಲಿಕುಳದಲ್ಲಿ ಅನೈತಿಕ ಗೂಂಡಾಗಿರಿ, ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ, ಬಂಟ್ವಾಳ ಮೇರಮಜಲಿನಲ್ಲಿ ದಲಿತ ಬಾಲಕಿ ಮೇಲೆ ಹಾಕಿದ ಲವ್‌ ಜಿಹಾದ್ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ನಡೆದು ಹಲವಾರು ಪ್ರಕರಣದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ತಡೆಯುವ ನಿಟ್ಟಿನಲ್ಲಿ ‘ಸಾಂಸ್ಥಿಕ ದಬ್ಬಾಳಿಕೆಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳ ರಕ್ಷಣೆ ಖಾತ್ರಿಪಡಿಸಿ’ ಎಂಬ ಘೋಷಣೆಯೊಂದಿಗೆ ಈ ಸಮಾವೇಶ ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪುತ್ತೂರಿನ ದರ್ಬೆ ವೃತ್ತದಿಂದ ಮದ್ಯಾಹ್ನ 2 ಗಂಟೆಗೆ ರ್ಯಾಲಿ ನಡೆಸಲಾಗುವುದು. ಬಳಿಕ ಸಾರ್ವಜನಿಕ ಸಮಾವೇಶ ನಡೆಯಲಿದೆ. ಸಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸಿರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಾಸಿರ್ ಸಮಾವೇಶಕ್ಕೆ ಆಗಮಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಪೂಂಜಾಲಕಟ್ಟೆ, ಮಹಮ್ಮದ್ ರಿಯಾಝ್, ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ, ಸದಸ್ಯೆ ಮಿಶ್ರಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News