ಉಡುಪಿ ನ್ಯಾಯವಾದಿಗೆ ಹಲ್ಲೆ ಪ್ರಕರಣ: ಕೋರ್ಟ್ ಕಲಾಪದಿಂದ ದೂರ ಉಳಿದ ವಕೀಲರು

Update: 2018-02-21 11:06 GMT

ಉಡುಪಿ, ಫೆ.21: ಉಡುಪಿಯ ನ್ಯಾಯವಾದಿ ಅಲೆವೂರು ಪ್ರೇಮರಾಜ ಕಿಣಿ ಮೇಲಿನ ಹಲ್ಲೆಯನ್ನು ಖಂಡಿಸಿ ಉಡುಪಿ ವಕೀಲರ ಸಂಘದ ನೇತೃತ್ವದಲ್ಲಿ ಉಡುಪಿಯ ವಕೀಲರು ಇಂದು ನ್ಯಾಯಾಲಯಗಳ ಕಾರ್ಯಕಲಾಪದಿಂದ ದೂರ ಉಳಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಬಳಿಕ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಸಭೆ ನಡೆಸಿ ಈ ಕೃತ್ಯವನ್ನು ಖಂಡಿಸಲಾಯಿತು. ಉಡುಪಿಯ ಎಲ್ಲ ವಕೀಲರು ನ್ಯಾಯಾಲಯಗಳ ಕಾರ್ಯಕಲಾಪದಿಂದ ದೂರು ಉಳಿಯುವುದರೊಂದಿಗೆ ಹಲ್ಲೆ ಕೃತ್ಯವನ್ನು ಖಂಡಿಸಿದ್ದೇವೆ. ಇದು ಕೋರ್ಟ್ ಕಲಾಪಕ್ಕೆ ಬಹಿಷ್ಕಾರ ಅಲ್ಲ. ನಾವು ಇಲ್ಲದೆಯೂ ನ್ಯಾಯಾಲಯದ ಕಲಾಪಗಳು ಇಂದು ನಡೆದಿವೆ ಎಂದು ವಕೀಲರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಬ್ಬಾರ್, ಉಪಾಧ್ಯಕ್ಷ ಆತ್ರಾಡಿ ಪೃಥ್ವಿರಾಜ ಹೆಗ್ಡೆ, ಹಿರಿಯ ವಕೀಲರಾದ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರೇಮರಾಜ್ ಕಿಣಿ ಹಲ್ಲೆ ಪ್ರಕರಣದಲ್ಲಿ ಉಡುಪಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಹಲ್ಲೆ ನಡೆಸಿದವರಿಂದ ಸುಳ್ಳು ದೂರನ್ನು ಪಡೆದು ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳೊಂದಿಗೆ ಶಾಮೀಲಾಗಿರುವ ಜೋಗಿಯನ್ನು ಕೂಡಲೇ ಅಮಾನತುಗೊಳಿಸಿ, ಬೇರೆ ಅಧಿಕಾರಿಗಳಿಂದ ಪ್ರಕರಣದ ತನಿಖೆ ನಡೆಸುವಂತೆ ವಕೀಲರ ಸಂಘ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಹಲ್ಲೆ ಪ್ರಕರಣವನ್ನು ಖಂಡಿಸಿ ಕುಂದಾಪುರ ಹಾಗೂ ಕಾರ್ಕಳ ವಕೀಲರ ಸಂಘದ ಸದಸ್ಯರು ಕೂಡ ಇಂದು ನ್ಯಾಯಾಲಯಗಳ ಕಲಾಪದಿಂದ ದೂರ ಉಳಿದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ದೂರು- ಪ್ರತಿದೂರು: ಫೆ.19ರಂದು ಬೆಳಗ್ಗೆ 10.30ಕ್ಕೆ ಉಡುಪಿ ಕೆ.ಎಂ. ಮಾರ್ಗದ ತನ್ನ ಕಛೇರಿಯಲ್ಲಿದ್ದ ಉಡುಪಿಯ ವಕೀಲ ಪ್ರೇಮಾರಾಜ್ ಕಿಣಿ (47) ಎಂಬವರಿಗೆ ವಕೀಲಿಕೆ ಶುಲ್ಕದ ವಿಚಾರದಲ್ಲಿ ಅತ್ರಾಡಿಯ ವಸಂತ ಶೆಟ್ಟಿ ಹಾಗೂ ಇನ್ನೊಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು, ತುಳಿದಿದ್ದು, ಅಲ್ಲಿಗೆ ಬಂದ ಸಹೋದ್ಯೋಗಿ ಪೂರ್ಣಿಮಾ ಕೆ. ಎಂಬವರಿಗೂ ಹಲ್ಲೆ ಮಾಡಿದ್ದಾರೆ ಎಂದು ಪೇಮ್‌ರಾಜ್ ಕಿಣಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ರಾಡಿಯ ವಸಂತ ಶೆಟ್ಟಿ(60) ಎಂಬವರು ತನ್ನ ಮಗ ವಿವೇಕಾನಂದ ಎಂಬವರೊಂದಿಗೆ ಫೆ.19ರಂದು ಬೆಳಗ್ಗೆ 10:15 ಗಂಟೆಗೆ ಉಡುಪಿ ಕೆಎಂ ಮಾರ್ಗದಲ್ಲಿರುವ ವಕೀಲ ಪ್ರೇಮರಾಜ್ ಕಿಣಿಯ ಕಛೇರಿಗೆ ಅವರ ಅತ್ತೆಯ ಅಪಘಾತ ಪ್ರಕರಣದ ಸಂಬಂಧ ಮಾತುಕತೆಗೆಂದು ತೆರಳಿದ್ದು, ವಕೀಲಿಕೆ ಶುಲ್ಕದ ಬಗ್ಗೆ ಮಾತುಕತೆ ನಡೆಸುವಾಗ ಪ್ರೇಮರಾಜ್ ಕಿಣಿ ಮತ್ತು ಅವರ ಜೊತೆ ಕೆಲಸ ಮಾಡುವ ಕಿರಣ್ ಹಾಗೂ ಇನ್ನೊಬ್ಬ ಮಹಿಳೆ ಕುತ್ತಿಗೆಯನ್ನು ಒತ್ತಿ ಹಿಡಿದು ಗೋಡೆಗೆ ಒತ್ತಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News