ಸುಳ್ಯ ವಿದ್ಯಾರ್ಥಿನಿಯ ಹತ್ಯೆ ಪ್ರಕರಣ: ಎನ್‌ಎಸ್‌ಯುಐ ಖಂಡನೆ

Update: 2018-02-21 12:25 GMT

ಮಂಗಳೂರು, ಫೆ. 21: ಸುಳ್ಯದ ಎನ್ನೆಂಸಿ ಪದವಿ ಕಾಲೇಜಿನ ವಿದ್ಯಾರ್ಥಿನಿಯನ್ನು ಸಹಪಾಠಿ ವಿದ್ಯಾರ್ಥಿ ಚೂರಿ ಇರಿದು ಕೊಲೆಗೈದ ಪ್ರಕರಣವನ್ನು ಖಂಡಿಸುವುದಾಗಿ ಎನ್‌ಎಸ್‌ಯುಐ ಹೇಳಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ದ.ಕ. ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಅಬ್ದುಲ್ಲಾ ಬಿನ್ನು ಮಾತನಾಡಿ, ಎಲ್ಲಾ ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಸಮಿತಿಯನ್ನು ರಚಿಸಬೇಕು ಹಾಗೂ ಸಮಿತಿ ಕ್ರಿಯಾಶೀಲವಾಗಿರುವಂತೆ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಯಾವುದೋ ಕಾರಣಕ್ಕೆ ಕಾಲೇಜುಗಳು ಹತಾಶರಾಗಿ ಈ ರೀತಿಯ ಹೆಜ್ಜೆಗೆ ಮುಂದಾಗುವುದನ್ನು ಕೌನ್ಸೆಲಿಂಗ್ ಸಮಿತಿಗಳಿಂದ ತಪ್ಪಿಸಬಹುದಾಗಿದೆ. ಈ ಬಗ್ಗೆ ರಾಜ್ಯ ಸರಕಾರದ ಗಮನವನ್ನೂ ಸೆಳೆಯುವುದಾಗಿ ಅವರು ಹೇಳಿದರು.

ಈ ಪ್ರಕರಣವನ್ನು ರಾಜಕೀಯ ಮಾಡುವುದು ನಮ್ಮ ಉದ್ದೇಶವಲ್ಲ. ಆದರೆ, ಈ ಪ್ರಕರಣದಲ್ಲಿ ವಿದ್ಯಾರ್ಥಿಗಳ ಧರ್ಮ ವಿಭಿನ್ನವಾಗಿದ್ದರೆ, ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜಿಲ್ಲಾ ಭೇಟಿಯಲ್ಲಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದರೂ ಈ ಬಗ್ಗೆ ಮಾತನಾಡಿಲ್ಲ. ನಿರ್ದಿಷ್ಟ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಕೊಲೆಯಾದವರನ್ನು ತಮ್ಮ ಕಾರ್ಯಕರ್ತರೆಂದು ಹೇಳಿಕೊಂಡು ರಾಜಕೀಯ ಮಾಡುವ ಕಾರ್ಯವನ್ನೂ ಬಿಜೆಪಿಯವರು ಮಾಡುತ್ತಾರೆ. ಆ ರೀತಿ ಮಾಡುವುು ಸರಿಯಲ್ಲ ಎಂದವರು ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಯಿಂದಾಗಿ ಬಹಳಷ್ಟು ಮಹಿಳೆಯರು ಬಲಿಪಶುಗಳಾಗುತ್ತಿದ್ದಾರೆ. ಹಾಡು ಹಗಲು ತಮ್ಮ ಕಣ್ಣೆದುರೇ ವಿದ್ಯಾರ್ಥಿನಿಯೊಬ್ಬಳಿಗೆ ಚೂರಿ ಇರಿಯಲಾಗುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ ಬುದ್ಧಿವಂತರ ಜಿಲ್ಲೆಯಲ್ಲಿ ಇರುವುದು ನಿಜಕ್ಕೂ ಬೇಸರದ ಸಂಗತಿ. ಈ ರೀತಿಯ ಕಾಲೇಜು ವಿದ್ಯಾರ್ಥಿಗಳ ಪ್ರಕರಣಗಳಲ್ಲಿ ಕಾಲೇಜು ಆಡಳಿತ ಮಂಡಳಿ ಕೂಡಾ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಎನ್‌ಎಸ್‌ಯುಐನ ಸುಹಾನ್ ಆಳ್ವ, ಅಬ್ದುಲ್ ರೆಹಮಾನ್, ಜೋಶ್ವಾ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News